ADVERTISEMENT

ರಾಜೇಶ್‌ ನೇಮಕ: ಪ್ರಭಾವಿ ಹುದ್ದೆಗೆ ಕಿರಿ ವಯಸ್ಸಿನ ಪ್ರಚಾರಕ

ಪಕ್ಷ– ಆರ್‌ಎಸ್‌ಎಸ್‌ ಮಧ್ಯೆ ಸಮನ್ವಯವೇ ಸಂಘಟನಾ ಕಾರ್ಯದರ್ಶಿ ಕರ್ತವ್ಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 20:05 IST
Last Updated 21 ಜುಲೈ 2022, 20:05 IST
ರಾಜೇಶ್ ಜಿ.ವಿ
ರಾಜೇಶ್ ಜಿ.ವಿ   

ಬೆಂಗಳೂರು: ಬಿಜೆಪಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಅತಿ ಕಿರಿಯ ವಯಸ್ಸಿನ ರಾಜೇಶ್‌ ಜಿ.ವಿ ಅವರನ್ನು ನೇಮಕ ಮಾಡಲಾಗಿದೆ.

ಪ್ರಚಾರಕರಾಗಿ ತುಮಕೂರು ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಾಜೇಶ್‌ ಅವರನ್ನು ರಾಜಕೀಯ ಕ್ಷೇತ್ರಕ್ಕೆ ನಿಯುಕ್ತಿ ಮಾಡುವ ನಿರ್ಣಯವನ್ನು ಆರ್‌ಎಸ್‌ಎಸ್‌ನ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಘಟನಾ ಕಾರ್ಯದರ್ಶಿ ಹುದ್ದೆಗೆ ನೇಮಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಬಿ.ಎಲ್‌.ಸಂತೋಷ್‌ ಅವರು ನಿಯುಕ್ತಿಗೊಂಡ ಬಳಿಕ ಹುದ್ದೆಯ ಮಹತ್ವವೂ ಹೆಚ್ಚಾಯಿತು. ಯಡಿಯೂರಪ್ಪ ಪಕ್ಷ ಬಿಟ್ಟು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಸಂತೋಷ್‌ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದರ ಜತೆಗೆ ಸಂಘಟನೆಯನ್ನು ಬಲಪಡಿಸಿದರು. ಅಲ್ಲದೇ, ಪಕ್ಷದಲ್ಲಿ ಘಟಾನುಘಟಿ ನಾಯಕರ ಪ್ರಾಬಲ್ಯವನ್ನೂ ತಗ್ಗಿಸಿದರು. ಮೋದಿ ಪ್ರಧಾನಿ ಆದ ಬಳಿಕ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಹುದ್ದೆಗೆ ಸಂತೋಷ್‌ ಅವರನ್ನು ನಿಯುಕ್ತಿಗೊಳಿಸಲಾಯಿತು.

ADVERTISEMENT

ಬಿಜೆಪಿ ರಾಜ್ಯ ಘಟಕಕ್ಕೆ ಸಂತೋಷ್‌ ಬಳಿಕ ಅರುಣ್‌ಕುಮಾರ್ ಅವರನ್ನು ನೇಮಿಸಲಾಯಿತು. ಈಗ ಅತಿ ಕಿರಿಯ ವಯಸ್ಸಿನ ಪ್ರಚಾರಕ ರಾಜೇಶ್ (37) ಅವರನ್ನು ನಿಯುಕ್ತಿಗೊಳಿಸಲಾಗಿದೆ. ಪಕ್ಷದಲ್ಲಿ ಅತ್ಯಂತ ಹಿರಿಯ ಮತ್ತು ಅನುಭವಿ ನಾಯಕರ ಜತೆ ಕಾರ್ಯನಿರ್ವಹಿಸುವ ಸವಾಲು ರಾಜೇಶ್‌ ಅವರಿಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ರಾಜೇಶ್‌ ಮೈಸೂರು ಮತ್ತು ತುಮಕೂರು ಭಾಗದಲ್ಲಿ ಪ್ರಚಾರಕ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.