ADVERTISEMENT

ಬಜಪೆ, ಕಿನ್ನಿಗೋಳಿ, ಮಂಕಿ, ಬಾಶೆಟ್ಟಿಹಳ್ಳಿ ಪಟ್ಟಣಪಂಚಾಯಿತಿಯಲ್ಲಿ ಬಿಜೆಪಿ ಜಯಭೇರಿ

ಬಜಪೆ, ಕಿನ್ನಿಗೋಳಿ, ಮಂಕಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅರಳಿದ ಕಮಲ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 16:34 IST
Last Updated 24 ಡಿಸೆಂಬರ್ 2025, 16:34 IST
   

ಬೆಂಗಳೂರು: ರಾಜ್ಯದ ನಾಲ್ಕು ಪಟ್ಟಣ ಪಂಚಾಯಿತಿಗಳು ಮತ್ತು ಪಟ್ಟಣ ಪಂಚಾಯಿತಿ, ನಗರಸಭೆಯ ಒಂದು ತಲಾ ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.

ಈ ಸ್ಥಳೀಯ ಸಂಸ್ಥೆಗಳ ಒಟ್ಟು 78 ಕ್ಷೇತ್ರಗಳಿಗೆ ಡಿ.21ರಂದು ಚುನಾವಣೆ ನಡೆದಿದ್ದು, ಇಂದು ಮತಎಣಿಕೆ ನಡೆಯಿತು. ಬಿಜೆಪಿ ಒಟ್ಟು 49 ಕ್ಷೇತ್ರ ಗೆದ್ದಿದೆ. 4 ಪಟ್ಟಣ ಪಂಚಾಯಿತಿಗಳಲ್ಲಿ ಬಹುಮತ ಪೆದುಕೊಂಡಿದೆ.

ರಾಜ್ಯದ ಆಡಳಿತರೂಢ ಕಾಂಗ್ರೆಸ್‌ ಪಕ್ಷವು  23 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಎಸ್‌ಡಿಪಿಐ 3 ಮತ್ತು ಜೆಡಿ‌ಎಸ್‌ 1 ಕ್ಷೇತ್ರದಲ್ಲಿ ಜಯಗಳಿಸಿದೆ. ಎರಡು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ.

ಬಜಪೆ ಪಟ್ಟಣ ಪಂಚಾಯಿತಿಯ 19 ಸ್ಥಾನಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 4, ಎಸ್‌ಡಿಪಿಐ 3 ಹಾಗೂ ಪಕ್ಷೇತರ ಒಂದು ಸ್ಥಾನದಲ್ಲಿ ಗೆದ್ದಿದ್ದಾರೆ.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್ 8 ಸ್ಥಾನ ಗಳಿಸಿವೆ. 

ಬಜಪೆ, ಮಳವೂರು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಬಜಪೆ ಪಟ್ಟಣ ಪಂಚಾಯಿತಿ ಹಾಗೂ ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಕಿನ್ನಿಗೋಳಿ ಪಟ್ಟಣ  ಪಂಚಾಯಿತಿ ರಚಿಸಲಾಗಿತ್ತು.2021ರಲ್ಲಿಯೇ ರಚನೆಯಾಗಿದ್ದು, ಮೊದಲ ಬಾರಿಗೆ ಚುನಾವಣೆ ನಡೆಯಿತು.

ಬಾಶೆಟ್ಟಿಹಳ್ಳಿ: ಬಿಜೆಪಿ ಗೆಲುವು 

ಗ್ರಾಮ ಪಂಚಾಯಿತಿಯಿಂದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.

19 ವಾರ್ಡ್‌ಗಳಲ್ಲಿ ಬಿಜೆಪಿ 14ರಲ್ಲಿ ಜಯಗಳಿಸಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್‌ ಮೂರು, ಜೆಡಿಎಸ್ ಒಂದು ಹಾಗೂ ಸ್ವತಂತ್ರ‌ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

ಡಿ.21ರಂದು ಪಟ್ಟಣ ಪಂಚಾಯಿತಿ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 21ನೇ ಒಂದು ವಾರ್ಡ್‌ಗೆ ಉಪ ಚುನಾವಣೆಯ ಮತದಾನ ನಡೆದಿತ್ತು. 

ಬಿಜೆಪಿ ಹಾಗೂ ಜೆಡಿಎಸ್‌ ಇಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ದೊಡ್ಡಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ವೇಳೆ ಮೈತ್ರಿಯಲ್ಲಿ ಉಂಟಾದ ಬಿರುಕು ಈಗಲೂ ಮುಂದುವರೆದಿದೆ.

ಮಂಕಿ ಪ.ಪಂ: ಬಿಜೆಪಿಗೆ ಬಹುಮತ

ಹೊನ್ನಾವರ ವರದಿ (ಉತ್ತರ ಕನ್ನಡ): ಮಂಕಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದು, 20 ವಾರ್ಡ್‌ಗಳ ಪೈಕಿ 12 ಸ್ಥಾನ ಗೆದ್ದು, ಸ್ಪಷ್ಟ ಬಹುಮತ ಗಳಿಸಿದೆ.

2 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ 6 ಕ್ಷೇತ್ರ ಗೆದ್ದಿದ್ದು, ಕಾಂಗ್ರೆಸ್ 8 ಸ್ಥಾನ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಬಿಜೆಪಿ ಬಹುಮತ ಪಡೆಯುವುದರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಮ್ಮದೇ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

2020ರ ನವೆಂಬರ್‌ನಲ್ಲಿ ಮಂಕಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಐದು ವರ್ಷಗಳ ಬಳಿಕ ಚುನಾವಣೆ ನಡೆಯಿತು.

ತುರುವಿಹಾಳ: ಗೆದ್ದ ಬಿಜೆಪಿ

 ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ ವಾರ್ಡ್‌ ನಂ. 4ಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 

ದೊಡ್ಡಬಳ್ಳಾಪುರ ನಗರಸಭೆ 21ನೇ ವಾರ್ಡ್‌ ಉಪಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.