ADVERTISEMENT

ಅ.3 ರಂದು ಬಿಜೆಪಿ ಪ್ರಮುಖ ನಾಯಕರ ಸಭೆ: ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಚರ್ಚೆ

ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 19:00 IST
Last Updated 30 ಸೆಪ್ಟೆಂಬರ್ 2021, 19:00 IST

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಭಾನುವಾರ (ಅ.3) ಬಿಜೆಪಿ ಪ್ರಮುಖ ನಾಯಕರ ಸಭೆಯನ್ನು ಕರೆಯಲಾಗಿದೆ.

ಈ ಎರಡೂ ಉಪಚುನಾವಣೆಗಳು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿದ್ದು, ಇವುಗಳನ್ನು ಗೆಲ್ಲುವ ದೃಷ್ಟಿಯಿಂದ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಈ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಹಾನಗಲ್‌ ಕ್ಷೇತ್ರಕ್ಕೆ ಶಿವಕುಮಾರ್ ಉದಾಸಿ ಅವರ ಪತ್ನಿಗೆ ಮತ್ತು ಸಿಂದಗಿಯಲ್ಲಿ ರಮೇಶ ಭೂಸನೂರ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ, ಇವೆರಡೂ ಕ್ಷೇತ್ರಗಳು ಪಕ್ಷಕ್ಕೆ ಸುಲಭದ ತುತ್ತಲ್ಲ. ಮುಖ್ಯವಾಗಿ ಮುಸ್ಲಿಂ ಮತದಾರರ ಸಂಖ್ಯೆ ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಗೆಲುವಿಗೆ ಯಾವ ರಣತಂತ್ರ ಅನುಸರಿಸಬೇಕು ಎಂಬ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಅಲ್ಲದೆ, 2023 ರ ವಿಧಾನಸಭಾ ಚುನಾವಣೆಯ ಸಿದ್ಧತೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪಕ್ಷದ ಸಂಘಟನೆ ಬಲಪಡಿಸುವುದು ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸುವ ವಿಚಾರವೂ ಪ್ರಸ್ತಾಪವಾಗಲಿದೆ.

ಬೊಮ್ಮಾಯಿ ದೆಹಲಿಗೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅ. 8ಕ್ಕೆ ದೆಹಲಿಗೆ ತೆರಳಲಿದ್ದು, ವಿವಿಧ ಸಚಿವರ ಜತೆ ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.

ಆರ್‌ಎಸ್‌ಎಸ್‌ ನಾಯಕರ ಜತೆ ಚರ್ಚೆ

ಮುಖ್ಯಮಂತ್ರಿ ಬೊಮ್ಮಾಯಿ ಅವರು ‘ಕೇಶವಕೃಪಾ’ದಲ್ಲಿ ಆರ್‌ಎಸ್‌ಎಸ್‌ ಮುಖಂಡರ ಜತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ನೀಡುವ ಉದ್ದೇಶದ ಮಸೂದೆ ವಿಚಾರ, ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ಆರ್‌ಎಸ್‌ಎಸ್‌ ಅನ್ನು ತಾಲಿಬಾನ್‌ಗೆ ಹೋಲಿಸಿ ನಡೆಸುತ್ತಿರುವ ಅಪಪ್ರಚಾರ ಸೇರಿ ಹಲವು ವಿಚಾರಗಳು ಪ್ರಸ್ತಾಪ ಆದವು ಎಂದು ಮೂಲಗಳು ತಿಳಿಸಿವೆ.

ಧಾರ್ಮಿಕ ಕಟ್ಟಡಗಳ ಮಸೂದೆ ವಿಚಾರದಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅದನ್ನು ಬೇರೆಯದೇ ರೀತಿಯಲ್ಲಿ ನಿಭಾಯಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಯಿತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.