ADVERTISEMENT

ಬಿಜೆಪಿಯಿಂದ ಬಹುದೊಡ್ಡ ಸೇವಾ ಯಜ್ಞ: ಏಳು ರಾಜ್ಯಗಳೊಂದಿಗೆ ವಿಡಿಯೊ ಸಂವಾದ

ಪಕ್ಷ ಜನ್ಮ ತಳೆದದ್ದೇ ಜನ ಸೇವೆಗಾಗಿ –ಮೋದಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 20:49 IST
Last Updated 4 ಜುಲೈ 2020, 20:49 IST
ಬಿಜೆಪಿಯ ‘ಸೇವೆಯೇ ಸಂಘಟನೆ’ ಅಭಿಯಾನ ಕುರಿತು ಶನಿವಾರ ನಡೆದ ವಿಡಿಯೊ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು
ಬಿಜೆಪಿಯ ‘ಸೇವೆಯೇ ಸಂಘಟನೆ’ ಅಭಿಯಾನ ಕುರಿತು ಶನಿವಾರ ನಡೆದ ವಿಡಿಯೊ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು   

ಬೆಂಗಳೂರು: ‘ಕೊರೊನಾ ತಂದಿತ್ತಿರುವ ಸಂಕಷ್ಟದಿಂದ ಜನರನ್ನು ಪಾರು ಮಾಡುವ ಕಾರ್ಯದಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ. ಇದೊಂದು ಮಹಾನ್‌ ಸೇವಾ ಯಜ್ಞವಾಗಿದ್ದು, ಇದು ನಿರಂತರವಾಗಿ ಮುಂದುವರಿಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೆಹಲಿಯಿಂದ ವಿಡಿಯೊ ಸಂವಾದ ನಡೆಸಿದ ಅವರು, ‘ಸೇವೆಯೇ ಸಂಘಟನೆ’ ಅಭಿಯಾನದಡಿ ಕರ್ನಾಟಕ ಸಹಿತ ಏಳು ರಾಜ್ಯಗಳಲ್ಲಿ ನಡೆದಿರುವ ಸೇವಾ ಕಾರ್ಯಗಳ ಮಾಹಿತಿಗಳನ್ನು ಪಡೆದುಕೊಂಡರು.

ಈ ವೇಳೆ ಮಾತನಾಡಿದ ಅವರು, ‘ನಿಸ್ವಾರ್ಥ ಸೇವೆಯೇ ನಮ್ಮ ಧ್ಯೇಯ. ಇಂತಹ ಸೇವೆಯನ್ನು ನಾವು ರಾಜಕೀಯ ಲಾಭಕ್ಕಾಗಿ ಮಾಡುವವರಲ್ಲ. ದೇಶಕ್ಕೆ ಎದುರಾದ ಆಪತ್ತನ್ನು ಸೇವೆ ಸಲ್ಲಿಸುವುದಕ್ಕೆ ದೊರೆತ ದೊಡ್ಡ ಅವಕಾಶ ಎಂಬುದಾಗಿ ಬಳಸಿಕೊಂಡ ಈ ಕಾರ್ಯ ಮುಂದಿನ ಪೀಳಿಗೆಗೂ ತಿಳಿಯುವಂತಾಗಬೇಕು. ಅದಕ್ಕಾಗಿ ಡಿಜಿಟಲ್‌ ಪುಸ್ತಕದ ರೂಪದಲ್ಲಿ ಈ ಸೇವಾ ಕಾರ್ಯಗಳ ದಾಖಲೀಕರಣ ಆಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮಾತನಾಡಿ, ಕೊರೊನಾ ನಿರ್ವಹಣೆಯಲ್ಲಿ ಪ್ರಧಾನಿ ತೋರಿಸಿದ ದಾರಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಅಭಿನಂದನೆ ವ್ಯಕ್ತವಾಗಿದೆ ಎಂದರು.‌

ಬಳಿಕ ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ದೆಹಲಿ, ಕರ್ನಾಟಕ, ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆದ ಸೇವಾ ಕಾರ್ಯಗಳ ಕುರಿತು ಪ್ರಧಾನಿ ಅವರಿಗೆ ಮನವರಿಕೆ ಮಾಡಲಾಯಿತು. ಪ್ರತಿ ರಾಜ್ಯದ ವಿವರಣೆ ಮುಗಿದಾಗಲೂ ಪ್ರಧಾನಿ ಅವರು, ರಾಜ್ಯದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ರಾಜ್ಯ ಬಿಜೆಪಿ ಸೇವೆಗೆ ಮೆಚ್ಚುಗೆ
ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಸೇವಾ ಕಾರ್ಯಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಪ್ರಧಾನಿ ಮೆಚ್ಚುಗೆ ಸೂಚಿಸಿದರು.

ರಾಜ್ಯದಲ್ಲಿನ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಪ‍ಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್,‘1.50 ಕೋಟಿ ಆಹಾರ ಕಿಟ್ ವಿತರಿಸಲಾಗಿದೆ. 4.33 ಲಕ್ಷ ಸ್ಯಾನಿಟೈಸರ್, 7.22 ಲಕ್ಷ ಮುಖಗವಸು ಹಂಚಲಾಗಿದೆ. ವಲಸೆ ಕಾರ್ಮಿಕರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಲಾಗಿದೆ’ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಲಕ್ಷ್ಮಣ ಸವದಿ, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.