ADVERTISEMENT

ಹಳೆ ಕಾಂಗ್ರೆಸ್ ಅಲ್ಲ, ಈಗಿರೋದು ಭ್ರಷ್ಟರ–ಕುಟುಂಬವಾದಿಗಳ‌‌ ಕೂಟ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2021, 7:32 IST
Last Updated 27 ಅಕ್ಟೋಬರ್ 2021, 7:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನೇಪಥ್ಯಕ್ಕೆ ಸರಿದು ಏಳು ದಶಕಗಳೇ ಸಂದಿವೆ. ಈಗಿರುವುದು ಗಾಂಧಿ ಹೆಸರನ್ನು ಹೈಜಾಕ್ ಮಾಡಿದ ಭ್ರಷ್ಟರ ಹಾಗೂ ಕುಟುಂಬವಾದಿಗಳ‌‌ ಕೂಟ ಎಂದು ಬಿಜೆಪಿ ಲೇವಡಿ ಮಾಡಿದೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕರ್ನಾಟಕ ಬಿಜೆಪಿ, ಈಗಿರುವುದು ಭಾರತ ರತ್ನ ಪ್ರಶಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡ ನಕಲಿ ಗಾಂಧಿ ಕುಟುಂಬದ ಮಹಾನುಭಾವರ ಪಕ್ಷ ಎಂದು ಟೀಕಿಸಿದೆ.

‘ಕಾಂಗ್ರೆಸ್ ವೈಚಾರಿಕತೆ ಎಂದರೆ ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ. ಇದರಿಂದ ಹೊರತಾದ ಚಿಂತನೆಗೆ ಅಲ್ಲಿ ಜಾಗವಿಲ್ಲ. ಚುನಾಯಿತ ಪ್ರತಿನಿಧಿಗಳ ಯೋಚನಾ ಲಹರಿಯನ್ನೇ ಕಾಂಗ್ರೆಸ್ ಹಾಳುಮಾಡಿದೆ. ದಿಕ್ಕು ಕಾಣದ ಕಾಂಗ್ರೆಸ್, ದಿಕ್ಕೆಟ್ಟು ಹೋಗಿದೆ’ ಎಂದು ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

ADVERTISEMENT

‘ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನಾಯಕರ ಮಧ್ಯೆ ಕಚ್ಚಾಟ ನಡೆಯುತ್ತಿರುವುದು ಎಐಸಿಸಿ ಸ್ವ ಘೋಷಿತ ಅಧ್ಯಕ್ಷೆಯ ಆತಂಕಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡು ಬುದ್ಧಿ ಹೇಳಿದ ಬಳಿಕವೂ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮೇರೆ‌ಮೀರಿದೆ. ಪಕ್ಷದ ನೀತಿ ನಿರೂಪಣೆ ವಿಚಾರದಲ್ಲಿ ಅಸ್ಪಷ್ಟತೆ, ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ, ಕಾರ್ಯಕರ್ತರಿಗೆ ತಲುಪದ ವಿಷಯ... ಇಷ್ಟೊಂದು ಗೊಂದಲವಿಟ್ಟುಕೊಂಡು ಪಕ್ಷ ಕಟ್ಟುವುದು ಹೇಗೆಂಬುದು ಸೋನಿಯಾ ಗಾಂಧಿ ಅವರ ಆತಂಕವಾಗಿದೆ. ಜನರಿಂದ ಆಯ್ಕೆಯಾದವರನ್ನು ಕುಟುಂಬದ ಪರಿಚಾರಿಕೆಗೆ ಬಳಸಿಕೊಂಡರೆ ಪಕ್ಷ ಉಳಿಯುತ್ತದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.