ADVERTISEMENT

ಸಾಲ ಮಾಡಿ ತುಪ್ಪ ತಿನ್ನಬೇಕೆಂಬ ಮಜಾವಾದಿ ರಾಜಕಾರಣಿ ಸಿದ್ದರಾಮಯ್ಯ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2021, 10:14 IST
Last Updated 23 ಅಕ್ಟೋಬರ್ 2021, 10:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ಮಜಾವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲಿಗರು ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದೆ.

‘ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ಮಜಾವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುವವರು ಸಿದ್ದರಾಮಯ್ಯ. ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿಗೆ ತಲುಪಿಸಿದ್ದೇ ಅವರ ಸಾಧನೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಇನ್ನೆಷ್ಟು ದಿನ ಸಂತೆ ಭಾಷಣ ಹೊಡೆಯುತ್ತೀರಿ ಸಿದ್ದರಾಮಯ್ಯನವರೇ? ನೀವು ಘೋಷಣೆ ಮಾಡಿದ 15 ಲಕ್ಷ ಮನೆ ಎಲ್ಲಿದೆ? ಭೂಮಿಯ ಮೇಲಿದೆಯೋ, ಮಂಗಳ ಗ್ರಹದಲ್ಲಿದೆಯೋ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಅಧಿಕಾರಾವಧಿಯ ಕೊನೆಯಲ್ಲಿ ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆಯನ್ನು ಬೆಂಗಳೂರು ನಗರದ ಬಡವರಿಗೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಆದರೆ ಬಜೆಟ್‌ನಲ್ಲಿ ಸೂಕ್ತ ಅನುದಾನ ಕಾಯ್ದಿರಿಸಲಿಲ್ಲ. ಮನೆಕಟ್ಟುವುದಕ್ಕೆ ಆಯ್ದುಕೊಂಡ ಜಾಗವೇ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ಪಿಎಚ್‌ಡಿ ನೀಡಬಹುದು. ಕೇವಲ ಘೋಷಣೆ ಮಾಡಿದ ಮಾತ್ರಕ್ಕೆ ಮನೆ ನಿರ್ಮಾಣವಾಗುತ್ತದೆಯೇ? ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರೇ, ಕೃಷ್ಣಾ ಕಣಿವೆ ನೀರಾವರಿ ಯೋಜನೆಗೆ ವಾರ್ಷಿಕ ₹10 ಸಾವಿರ ಕೋಟಿ ಅನುದಾನ ನೀಡುತ್ತೇನೆಂದು ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ’ ಪಾದಯಾತ್ರೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಿರಿ. ಆದರೆ ಕೊಟ್ಟಿದ್ದು ಬಿಡಿಗಾಸು. ಅಂಗೈಯಲ್ಲಿ ಆಕಾಶ ತೋರಿಸುವ ವಿಚಾರದಲ್ಲಿ ನೀವು ಪ್ರವೀಣರಲ್ಲವೇ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಅತಿದೊಡ್ಡ ಸಾಧನೆ ಎಂದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ ₹44 ಸಾವಿರಕ್ಕೂ ಅಧಿಕ ಸಾಲದ ಹೊರೆ ಹೇರಿದ್ದು. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕು ಬೂದಿ ಎರಚುತ್ತಾ ಎಲ್ಲರನ್ನೂ ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದೆಗೆಡಿಸಿದರು. ರಾಜ್ಯ ಏಕೀಕರಣಗೊಂಡ ಬಳಿಕ 2013 ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ ಎತ್ತುವಳಿ ₹1 ಲಕ್ಷ ಕೋಟಿ ಮಾತ್ರ. ಆದರೆ ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಮೊತ್ತ ₹3 ಲಕ್ಷ ಕೋಟಿ ತಲುಪಿತು. ಈಗ ಹೇಳಿ ರಾಜ್ಯಕ್ಕೆ ಸಾಲಭಾಗ್ಯ ನೀಡಿದ್ದು ಯಾರು ಸಿದ್ದರಾಮಯ್ಯನವರೇ? ನಿಮ್ಮ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕು’ ಎಂದು ಬಿಜೆಪಿ ಲೇವಡಿ ಮಾಡಿದೆ.

‘ಸಾಲಭಾಗ್ಯದ ರೂವಾರಿ ಸಿದ್ದರಾಮಯ್ಯ ಅವರ ಆರ್ಥಿಕ ಶಿಸ್ತಿನ ಕಥೆ 2013 - 2017!’ ಎಂದು ಗ್ರಾಫೊಂದನ್ನೂ ಬಿಜೆಪಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.