ADVERTISEMENT

ಹಿಂದೂ ಸಂಘಟನೆಗಳ ಮುಖಂಡರಿಗೆ ನಿರ್ಬಂಧ: ಬಿಜೆಪಿ ಕಿಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 18:37 IST
Last Updated 28 ಜನವರಿ 2026, 18:37 IST
   

ಬೆಂಗಳೂರು: ವಿವಿಧ ಜಿಲ್ಲೆಗಳಿಗೆ ತೆರಳಿ ಹಿಂದೂ ಸಮಾಜೋತ್ಸವಗಳಲ್ಲಿ ಭಾಗವಹಿಸದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಪೊಲೀಸರು, ಜಿಲ್ಲಾಡಳಿತಗಳು ನಿರ್ಬಂಧ ವಿಧಿಸುವ, ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿಷಯ ಪ್ರಸ್ತಾಪಿಸಿದ ವಿ. ಸುನಿಲ್‌ ಕುಮಾರ್‌, ‘ಕಲ್ಲಡ್ಕ ಪ್ರಭಾಕರ ಭಟ್‌, ವಿಕಾಸ್‌ ಪುತ್ತೂರು, ಪುನೀತ್‌ ಕೆರೆಹಳ್ಳಿ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರುಗಳು ಹಿಂದೂ ಸಮಾಜೋತ್ಸವಗಳಿಗೆ ತೆರಳಿ ಭಾಷಣ ಮಾಡಿದರೆ ಏನೊ ಆಗಿಬಿಡುತ್ತದೆ ಎಂದು ಊಹಿಸಿಕೊಂಡು ಪೊಲೀಸರು ನೋಟಿಸ್‌ ನೀಡುತ್ತಿದ್ದಾರೆ. ರಾಜ್ಯಪಾಲರ ಅಂಕಿತಕ್ಕೆ ಬಾಕಿ ಇರುವ ದ್ವೇಷ ಭಾಷಣ ತಡೆ ಮಸೂದೆ ಮೇಲೆ ತರೀಕೆರೆ ಪೊಲೀಸ್‌ ಇನ್‌ಸ್ಪೆಕ್ಟರ್ ನೋಟಿಸ್‌ ನೀಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪ್ರಭಾಕರ್‌ ಭಟ್‌ ಅವರ ಮೇಲೆ ಅನಗತ್ಯವಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತರನ್ನು ಸಹಿಸಲು ಸರ್ಕಾರಕ್ಕೆ ಆಗುತ್ತಿಲ್ಲವೇ’ ಎಂದೂ ಪ್ರಶ್ನಿಸಿದರು. ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಬಿಜೆಪಿಯ ಇತರ ಸದಸ್ಯರೂ ದನಿಗೂಡಿಸಿದರು.

ADVERTISEMENT

ಉತ್ತರ ನೀಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ, ‘ಇಂತಹ ನಿರ್ಧಾರಗಳು ಸರ್ಕಾರದ ಮಟ್ಟದಲ್ಲಿ ಆಗುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಕೋಮು ಪ್ರಚೋದನೆ, ಭಾಷಣ ನಿರ್ಬಂಧಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲೇ ಡಿಸಿಗಳು, ಎಸ್‌ಪಿಗಳು ಚಿಂತನೆ ಮಾಡಿ ನಿರ್ಧರಿಸುವ ಪ್ರಕ್ರಿಯೆ ನಮ್ಮ ಸರ್ಕಾರದಲ್ಲಿ ಮಾತ್ರವಲ್ಲ, ಎಲ್ಲ ಸರ್ಕಾರಗಳಲ್ಲೂ ಆಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಏನೂ ಇಲ್ಲ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ ಆಗಿರಬೇಕು ಎಂಬುದಷ್ಟೆ ನಮ್ಮ ಗುರಿ’ ಎಂದರು.

‘ದ್ವೇಷ ಭಾಷಣ ತಡೆ ಮಸೂದೆ ಇನ್ನೂ ಕಾನೂನು ಆಗಿಲ್ಲ. ಅದರ ಮೇಲೆ ಪೊಲೀಸ್ ಅಧಿಕಾರಿ ಹೇಗೆ ನೋಟಿಸ್‌ ನೀಡಿದರೆಂದು ಗೊತ್ತಿಲ್ಲ. ಗೃಹ ಸಚಿವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.