ADVERTISEMENT

ಮೋದಿ ಬಡವರೆಂದು ಬಿಂಬಿಸಲು ಬಿಜೆಪಿಯಿಂದ ಸಾವಿರಾರು ಕೋಟಿ ಖರ್ಚು: ಕನ್ಹಯ್ಯ 

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 15:03 IST
Last Updated 15 ಅಕ್ಟೋಬರ್ 2019, 15:03 IST
ಕನ್ಹಯ್ಯ ಕುಮಾರ್‌
ಕನ್ಹಯ್ಯ ಕುಮಾರ್‌    

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಬಡತನ ಕುಟುಂಬದಿಂದ ಬಂದ ವ್ಯಕ್ತಿ ಎಂಬುದನ್ನು ಬಿಂಬಿಸಲು ಬಿಜೆಪಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಗುಲಬರ್ಗಾವಿಶ್ವವಿದ್ಯಾಲಯಲ್ಲಿ ಆಯೋಜನೆಗೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕನ್ಹಯ್ಯ ಕುಮಾರ್‌ ಮಂಗಳವಾರ ಕಲಬುರ್ಗಿಗೆ ಆಗಮಿಸಿದ್ದರು. ಆದರೆ, ಉಪನ್ಯಾಸ ಕಾರ್ಯಕ್ರಮವನ್ನು ವಿವಿ ದಿಢೀರ್ ರದ್ದುಗೊಳಿಸಿತು. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಕುಮಾರ್‌ ರಾಜ್ಯ ಸರ್ಕಾರ, ಬಿಜೆಪಿ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಕಿಡಿ ಕಾರಿದರು.

ಸರ್ದಾರ್‌ ವಲ್ಲಭಬಾಯಿ ಪಟೇಲ್ ತಮಗಾಗಿ ಒಂದು ಮನೆಯನ್ನೂ ನಿರ್ಮಿಸಿಕೊಳ್ಳಲಿಲ್ಲ. ತಾವು ಮನೆ ನಿರ್ಮಿಸಿಕೊಂಡರೆ ಇನ್ನೆಲ್ಲಿ ಜನರ ಮನೆಗಳ ನಿರ್ಮಾಣಕ್ಕೆ ಹಣದ ಕೊರತೆ ಕಾಡುತ್ತದೋ ಎಂಬ ಆತಂಕ ಅವರಿಗಿತ್ತು. ಈಗ ನೋಡಿದರೆ ಕೇಂದ್ರದ ಬಿಜೆಪಿ ಸರ್ಕಾರ ಸರ್ದಾರ್‌ ಹೆಸರಿನಲ್ಲಿ ₹3 ಸಾವಿರ ಕೋಟಿ ಖರ್ಚು ಮಾಡಿ ಸ್ಮಾರಕ ನಿರ್ಮಿಸಿದೆ. ಈಗ ಸರ್ದಾರ್ ಇದ್ದಿದ್ದರೆ ಅವರ ಗತಿ ಹೇಗಿರುತ್ತಿತ್ತೊ ಗೊತ್ತಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿ ಕಾರಿದರು.

ADVERTISEMENT

ಕೇವಲ ₹300 ಕೋಟಿ ಖರ್ಚು ಮಾಡಿ ಒಂದು ಮೆಡಿಕಲ್ ಕಾಲೇಜು ನಿರ್ಮಿಸಿದ್ದರೆ ಸಾವಿರಾರು ಬಡ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟರು.

ಖಾಸಗಿಗೆ ಲಾಭ ಮಾಡಿಕೊಟ್ಟ ಮೋದಿ: ‍ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿ ಬುದ್ಧ, ಶಾಂತಿ ಎನ್ನುತ್ತಾರೆ. ಭಾರತಕ್ಕೆ ಹಿಂದಿರಗುತ್ತಿದ್ದಂತೆಯೇ ಯುದ್ಧ ಎನ್ನುತ್ತಾರೆ.

ಸಾರ್ವಜನಿಕ ಉದ್ಯಮಗಳನ್ನು ಒಂದೊಂದಾಗಿ ಖಾಸಗಿ ವಲಯಕ್ಕೆ ವರ್ಗಾಯಿಸುತ್ತಿದ್ದಾರೆ. ಈ ಹಿಂದೆ ಪೆಟ್ರೋಲಿಯಂ ಉದ್ಯಮದಲ್ಲಿದ್ದ ರಿಲಯನ್ಸ್ ಆ ಕ್ಷೇತ್ರದ ಸಹವಾಸವೇ ಬೇಡ ಎಂದು ದೂರ ಸರಿದಿತ್ತು. ಈಗ ಭಾರತ್ ಪೆಟ್ರೋಲಿಯಂ ಖಾಸಗಿ ವಲಯಕ್ಕೆ ವಹಿಸುವ ಮೋದಿ ಮಾತು ಹೊರಬೀಳುತ್ತಿದ್ದಂತೆಯೇ ರಿಲಯನ್ಸ್ ತಾನು ಭಾರತ್ ಪೆಟ್ರೋಲಿಯಂ ವಹಿಸಿಕೊಳ್ಳಲು ಮುಂದಾಗಿದೆ. ಇದ್ಯಾವ ನೀತಿ ತೋರಿಸುತ್ತದೆ? ಎಂದು ಪ್ರಶ್ನಿಸಿದರು.

ಇನ್ನು ಕಾರ್ಯಕ್ರಮ ರದ್ದಾದ ಬಗ್ಗೆ ಮಾತನಾಡಿದ ಕನ್ಹಯ್ಯ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಅವರು ಹೇಳಿದಂತೆಯೇ ಗುಲಬರ್ಗಾ ವಿಶ್ವವಿದ್ಯಾಲಯ ನಡೆದುಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.

‘ಕಳೆದ ಮೂರೂವರೆ ವರ್ಷಗಳಲ್ಲಿ ನಾನು ಎಲ್ಲಿಯೇ ಹೋದರೂ ಅಲ್ಲಿ ಕಾರ್ಯಕ್ರಮ ನಡೆಯದಂತೆ ನಿಷೇಧ ಹೇರಲಾಗುತ್ತಿದೆ. ಕಲಬುರ್ಗಿಯಲ್ಲಿಯೂ ಅದೇ ನಡೆದಿದೆ. ವಿದ್ಯಾರ್ಥಿಗಳು ಆಹ್ವಾನಿಸಿದ್ದರು ಎಂದು ಉಪನ್ಯಾಸ ನೀಡಲು ಬಂದಿದ್ದೆ. ವಾಕ್‌ ಸ್ವಾತಂತ್ರ್ಯ ಸಂವಿಧಾನವೇ ನಮಗೆ ನೀಡಿದ ಮೂಲಭೂತ ಹಕ್ಕು. ಅದನ್ನು ನಮ್ಮಿಂದ ಕಿತ್ತುಕೊಳ್ಳಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಭಾರತದಲ್ಲಿ ದಲಿತರು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಸರ್ಕಾರದ ವಿರುದ್ಧ ಯಾರಾದರೂ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.