ADVERTISEMENT

ಜನರ ಪ್ರಾಣ ಹಾನಿಗೆ ವಿಪಕ್ಷಗಳು ಕಾರಣ: ನಳಿನ್‌ಕುಮಾರ್ ಕಟೀಲ್ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮೇ 2021, 12:22 IST
Last Updated 14 ಮೇ 2021, 12:22 IST
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿದರು.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿದರು.   

ಮಂಗಳೂರು: ‘ಆರಂಭದಲ್ಲಿ ಬಿಜೆಪಿಯ ಲಸಿಕೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದವರೇ ಇಂದು ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಜನರ ದಾರಿ ತಪ್ಪಿಸುವ ಜತೆಗೆ, ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಕೋವಿಡ್‌ನಿಂದ ಹಲವರು ಮೃತರಾಗಲು ವಿಪಕ್ಷಗಳು ಕಾರಣವಾಗಿವೆ. ಆಗ ಜನರ ದಾರಿ ತಪ್ಪಿಸಿದ ಕಾರಣಕ್ಕೆ ಜನರು ಲಸಿಕೆ ತೆಗೆದುಕೊಂಡಿರಲಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ರಾಜಕೀಯ ಮಾಡುವ ಕಾಲವಲ್ಲ, ಒಟ್ಟಾಗಿ ಕೆಲಸ ಮಾಡುವ ಸಮಯ. ಟೀಕಿಸುವ ಬದಲಾಗಿ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಸಲಹೆ ನೀಡಿ. ಸರ್ಕಾರದ ಜೊತೆ ಕೈ ಜೋಡಿಸಿ. ಕೋವಿಡ್ ನಿರೋಧಕ ಲಸಿಕೆ ಸಿದ್ಧಪಡಿಸಲು ಎರಡು ಘಟಕಗಳು ಕೆಲಸ ಮಾಡುತ್ತಿವೆ. ಈಗಾಗಲೇ 19 ಕೋಟಿ ಲಸಿಕೆ ನೀಡಲಾಗಿದೆ. ಲಸಿಕೆ ಅಭಿಯಾನದ ಶುರುವಾದಾಗ ಈ ಲಸಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದಾರಿ ತಪ್ಪಿಸುವ ಪ್ರಯತ್ನ ನಡೆಯಿತು. ಆಗ ಲಸಿಕೆ ಬಗ್ಗೆ ನಂಬಿಕೆ ಇರಲಿಲ್ಲ. ಈಗ ಅವರೇ ಲಸಿಕೆ ಲಭ್ಯವಿಲ್ಲ ಎನ್ನುತ್ತಿದ್ದಾರೆ. ಕೋವಿಡ್‌ನಿಂದ ಹಲವರು ಮೃತರಾಗಲು ಇದೇ ಪಕ್ಷಗಳು ಕಾರಣವಾಗಿವೆ. ಆಗ ಜನರ ದಾರಿ ತಪ್ಪಿಸಿದ ಕಾರಣಕ್ಕೆ ಜನರು ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದರು.

‘ಕೋವಿಡ್ ನಿಯಂತ್ರಣಕ್ಕೆ ಎಷ್ಟೆಲ್ಲ ಜನರು ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಮಾಡುವ ಕೆಲಸಗಳ ಬಗ್ಗೆ ತಪ್ಪು ಮಾಹಿತಿ ನೀಡಿ, ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ. ವಿಪಕ್ಷಗಳು ರಾಜಕಾರಣ ಮಾಡುವ ಬದಲು ಜನರಿಗೆ ಆತ್ಮವಿಶ್ವಾಸ ತುಂಬಲಿ. ರಾಜಕಾರಣ ಬಿಟ್ಟು ಕರ್ತವ್ಯ ಮಾಡುವ ಕಾಲಘಟ್ಟಮತ್ತು ಅನಿವಾರ್ಯತೆಯಲ್ಲಿ ನಾವಿದ್ದೇವೆ’ ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನೆರವು ಸಿಗುತ್ತಿಲ್ಲ ಎನ್ನುವ ಆರೋಪ ಸರಿಯಲ್ಲ. ಕೇಂದ್ರ ಸರ್ಕಾರ ನಿಗದಿತ ಮಾನದಂಡ ಆಧರಿಸಿ, ಆಮ್ಲಜನಕ ಪೂರೈಕೆ ಮಾಡುತ್ತದೆ. ಅಗತ್ಯದ ಆಧಾರದ ಮೇಲೆ ಆಯಾ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ. ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಕೋವಿಡ್ ಪ್ರಕರಣಗಳು ಜಾಸ್ತಿ ಇದ್ದ ಕಾರಣ ಅಲ್ಲಿಗೆ ಮೊದಲು ಲಸಿಕೆ ಪೂರೈಸಲಾಗಿದೆ. ಇದೇ ಆಧಾರದಲ್ಲಿ ಕರ್ನಾಟಕಕ್ಕೆ ಲಸಿಕೆ ಕೊಡಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯದ ಸ್ಥಿತಿಗತಿ ಬಗ್ಗೆ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ಸದಾನಂದ ಗೌಡ ಅವರು ಔಷಧ ವಿಷಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ಪ್ಯಾಕೇಜ್ ನೀಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗಾಗಲೇ ಕೇಂದ್ರ ಸರ್ಕಾರ ಲಸಿಕೆ ಹಾಗೂ ಆಮ್ಲಜನಕಕ್ಕೆ ಮಾರ್ಗದರ್ಶಿ ರೂಪಿಸಿದ್ದರಿಂದ ತೊಂದರೆಯಾಗದು. ‘ಆಮ್ಲಜನಕ ಸಹಿತ ಹಾಸಿಗೆಗಳ ನಿರ್ಮಾಣಕ್ಕೆ ಅವಿರತ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಲಸಿಕೆ ಪೂರೈಕೆಯಾಗದಿದ್ದರೆ ನಾವೇನು ನೇಣು ಹಾಕಿಕೊಳ್ಳಬೇಕಾ’ ಎಂದು ಕೇಂದ್ರ ಸಚಿವ ಸದಾನಂದ ಗೌಡರು ಯಾವ ಆಧಾರದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಅವರು ಜನತೆಗೆ ಕೇಂದ್ರದ ನೆರವಿನ ಅಗತ್ಯದ ಬಗ್ಗೆ ಮಾತನಾಡಿದ ಆಡಿಯೊ ನಾನು ಕೇಳಿಲ್ಲ’ ಎಂದು ನಳಿನ್ ಸಮರ್ಥಿಸಿಕೊಂಡರು.

‘ರಾಜ್ಯದಲ್ಲಿ ಜಾರಿಯಲ್ಲಿರುವ ಸೆಮಿ ಲಾಕ್‍ಡೌನ್ ವಿಸ್ತರಣೆ ಕುರಿತು ಯಾವುದೇ ಸಲಹೆ ನೀಡಿಲ್ಲ. ಆದರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಸಮಸ್ಯೆಗೆ ಏನು ಮಾಡಬೇಕು ಎನ್ನುವ ಚರ್ಚೆ ನಡೆಸಲಾಗಿದೆ. ಬೆಂಗಳೂರು ಸೇರಿ ಪ್ರಮುಖ ಐದು ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟು ಮಾಡಿದರೆ ಉತ್ತಮ. ಈ ಅಂಶವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಕೋವಿಡ್ ರೋಗಿಗಳಿಗೆ ಆಂಬುಲೆನ್ಸ್ ಸೇವೆ ಉಚಿತವಾಗಿ ಸಿಗಲಿ ಎಂದು ಸಲಹೆ ನೀಡಿದ್ದೇನೆ’ ಎಂದು ತಿಳಿಸಿದರು.

ಕೋವಿಡ್‌ ಕೇರ್‌ಗೆ ಅನುದಾನ ನೀಡಲು ವಿನಂತಿ

ಶಾಸಕರು, ಸಂಸದರು ಎಲ್ಲ ಅನುದಾನಗಳನ್ನು ಕೋವಿಡ್‌ ಕೇರ್ ನಿಧಿಗೆ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿನಂತಿಸಿದರು.

‘ಕೋವಿಡ್ ನಿರ್ಮೂಲನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಬಿಜೆಪಿಯು ‘ಸೇವಾ ಹಿ ಸಂಘಟನ್’ ಹೆಸರಿನಲ್ಲಿ ಎಲ್ಲೆಡೆ ಕೋವಿಡ್ ಸೋಂಕಿತರ ಕುಟುಂಬಗಳಿಗೆ, ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡುತ್ತಿದೆ. ನಾನು ನನ್ನ ಸಂಸದ ನಿಧಿಯಿಂದ ₹ 2.50 ಕೋಟಿ ಮೊತ್ತವನ್ನು ಕೋವಿಡ್ ನಿಧಿಗೆ ಜಿಲ್ಲಾಧಿಕಾರಿ ಮೂಲಕ ನೀಡಿದ್ದೇನೆ. ಇದಲ್ಲದೆ, ಜಿಲ್ಲೆಗೆ ಅಗತ್ಯವಿರುವಷ್ಟು ಆಮ್ಲಜನಕ ಘಟಕ ಸ್ಥಾಪನೆಗೆ ನೆರವಿಗೆ ಯತ್ನ, ಲಸಿಕೆ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಶ್ರಮಿಸಬೇಕು’ ಎಂದರು.

ಶಾಸಕ ವೇದವ್ಯಾಸ ಕಾಮತ್, ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.