ADVERTISEMENT

ಮತಕ್ಕೆ ಹಾಕದಿದ್ದರೆ, ವಚನ ಭ್ರಷ್ಟರಾಗುತ್ತಾರೆ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:01 IST
Last Updated 21 ಜುಲೈ 2019, 20:01 IST
   

ಬೆಂಗಳೂರು: ವಿಶ್ವಾಸ ಮತ ನಿರ್ಣಯದ ಮೇಲೆ ಚರ್ಚೆ ಇನ್ನೂ ಎರಡು– ಮೂರು ದಿನಗಳ ಕಾಲ ಮುಂದುವರಿಸುವ ‘ದೋಸ್ತಿ’ ಪಕ್ಷಗಳ ತಂತ್ರ ಬಿಜೆಪಿಯ ಗಮನಕ್ಕೆ ಬರುತ್ತಿದ್ದಂತೆ, ಸದನದಲ್ಲಿ ಗದ್ದಲ ಎಬ್ಬಿಸದೇ ಶಾಂತವಾಗಿ ಕಲಾಪದಲ್ಲಿ ಭಾಗವಹಿಸಲು ನಿರ್ಧರಿಸಿದೆ.

ಈವರೆಗೂ ಸಹನೆಯನ್ನು ಪ್ರದರ್ಶಿಸಿರುವ ಬಿಜೆಪಿ ಅದನ್ನೇ ಪ್ರಬಲ ಅಸ್ತ್ರವಾಗಿ ಮುಂದುವರಿಸುವುದರ ಜತೆಗೆ, ತಕ್ಷಣವೇ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಲು ಒತ್ತಾಯಿಸಲಿದೆ.

ಶುಕ್ರವಾರ ಕಲಾಪದ ವೇಳೆ ಮಾತನಾಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಸೋಮವಾರವೇ ವಿಶ್ವಾಸ ಮತ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಸದನದಲ್ಲಿ ಭರವಸೆ ನೀಡಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿ ಸಭಾದ್ಯಕ್ಷರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ತೀರ್ಮಾನಿಸಿದೆ.

ADVERTISEMENT

ಮಾತು ತಪ್ಪುವವರಲ್ಲ: ‘ಸಿದ್ದರಾಮಯ್ಯ ಮತ್ತು ರಮೇಶ್‌ ಕುಮಾರ್‌ ಸಾರ್ವಜನಿಕವಾಗಿ ಮಾತು ಕೊಟ್ಟರೆ ತಪ್ಪುವವರಲ್ಲ. ನಾಳೆಯೂ ಅವರಿಬ್ಬರು ಮಾತು ತಪ್ಪುವುದಿಲ್ಲ. ವಿಶ್ವಾಸ ಮತ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ. ಹಾಗೆಯೇ ಆಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಒಂದು ವೇಳೆ ಕುಮಾರಸ್ವಾಮಿ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕದಿದ್ದರೆ, ಮತ್ತೊಮ್ಮೆ ವಚನಭ್ರಷ್ಟರಾಗುತ್ತಾರೆ. ಬಹುಮತ ಕಳೆದುಕೊಂಡಿರುವುದರಿಂದ ಗೌರವದಿಂದ ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ. ಸದನದ ನಡವಳಿಕೆ ಸುಪ್ರೀಂಕೋರ್ಟ್‌ ತೀರ್ಪಿನ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದರು.

ಇತಿ ಶ್ರೀ ಹಾಡಲಿ: ‘ನಾವು ಬೇರೆ ಏನೂ ಕೇಳುವುದಿಲ್ಲ, ನಿರ್ಣಯವನ್ನು ಮತಕ್ಕೆ ಹಾಕಬೇಕು. ಇದನ್ನೇ ಸದನದಲ್ಲಿ ಪಟ್ಟು ಹಿಡಿಯುತ್ತೇವೆ’ಎಂದು ಬಿಜೆಪಿ ನಾಯಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಮೇಶ್‌ ಕುಮಾರ್‌, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇವೆ. ನಾಳೆಯೇ(ಸೋಮವಾರ) ಇತಿಶ್ರೀ ಹಾಡಬೇಕು. ಶಾಸನ ಸಭೆಯಲ್ಲಿ ಕೊಟ್ಟ ಮಾತನ್ನು ಅವರು ತಪ್ಪುವಂತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.