ಬಿಜೆಪಿ
ಬೆಂಗಳೂರು: ಅತಿವೃಷ್ಟಿ-ನೆರೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಸರ್ಕಾರವನ್ನು ಎಚ್ಚರಿಸಲು ಶನಿವಾರ ನಡೆದ ಬಿಜೆಪಿ ಪ್ರಮುಖರ ಸಮಿತಿ ಸಭೆ ನಿರ್ಧರಿಸಿದೆ.
ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಕರ್ನಾಟಕದ 16ಕ್ಕೂ ಹೆಚ್ಚು ಜಿಲ್ಲೆಗಳು ಅತಿವೃಷ್ಟಿಗೆ ಸಿಲುಕಿವೆ. ರೈತರ ನೆರವಿಗೆ ಸರ್ಕಾರ ಧಾವಿಸಿಲ್ಲ. ಪುಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ನಂಬಿಕೊಳ್ಳದೆ, ರಾಜ್ಯ ಬಜೆಟ್‍ನಿಂದ ಹಣ ನೀಡಿ ರೈತರ ನೆರವಿಗೆ ಧಾವಿಸಿತ್ತು. ಈಗಿನ ಸರ್ಕಾರ ಜನರ ಕಷ್ಟಗಳನ್ನು ನಿರ್ಲಕ್ಷಿಸುತ್ತಿದೆ. ಈ ಕುರಿತು ವಾಸ್ತವ ಸ್ಥಿತಿಯ ಮಾಹಿತಿ ಪಡೆದು, ಸರ್ಕಾರಕ್ಕೆ ಮಾಹಿತಿ ನೀಡಲು ಬಿಜೆಪಿ ಪ್ರಮುಖ ನಾಯಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಸೆ.28ರಿಂದ ಬೆಂಗಳೂರು ನಗರದ ಗುಂಡಿಗಳನ್ನು ಮುಚ್ಚುವ ಅಭಿಯಾನ ಆರಂಭಿಸಲು, ಸ್ಮಾರ್ಟ್ ಮೀಟರ್ ಹಗರಣದ ವಿರುದ್ಧ ಹೋರಾಟ ದೊಡ್ಡ ಹೋರಾಟ ರೂಪಿಸಲು, ಜಾತಿ ಸಮೀಕ್ಷೆಯ ಲೋಪಗಳ ವಿರುದ್ಧ ಧ್ವನಿ ಎತ್ತಲು ನಿರ್ಧರಿಸಲಾಯಿತು ಎಂದು ವಿವರ ನೀಡಿದರು.
ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.