ADVERTISEMENT

ದ್ವೇಷ ತಡೆ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 16:02 IST
Last Updated 12 ಜನವರಿ 2026, 16:02 IST
ಆರ್.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಿಜೆಪಿ ನಾಯಕರ ನಿಯೋಗ
ಆರ್.ಅಶೋಕ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಿಜೆಪಿ ನಾಯಕರ ನಿಯೋಗ   

ಬೆಂಗಳೂರು: ದ್ವೇಷ ಭಾಷಣ ಮತ್ತು ದ್ವೇಷಾಪರರಾಧ ಪ್ರತಿಬಂಧಕ ಮಸೂದೆಗೆ ಸಹಿ ಹಾಕಬಾರದು ಎಂದು ಬಿಜೆಪಿ ನಿಯೋಗವು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿತು.

ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು, ರಾಜ್ಯಪಾಲರನ್ನು ಸೋಮವಾರ ಭೇಟಿ ಮಾಡಿತು.

ಕೋಗಿಲು ಬಡಾವಣೆಯಲ್ಲಿ ಒತ್ತುವರಿದಾರರಿಗೆ ಮತ್ತು ಬಾಂಗ್ಲಾ ಪ್ರಜೆಗಳಿಗೆ ಪರ್ಯಾಯ ಮನೆಗಳನ್ನೂ ನೀಡಬಾರದು ಎಂಬುದು ಸೇರಿ ವಿವಿಧ ಬೇಡಿಕೆಗಳ ಮನವಿ ಪತ್ರಗಳನ್ನು ಗೆಹಲೋತ್ ಅವರಿಗೆ ಸಲ್ಲಿಸಿತು.

ADVERTISEMENT

ಮನವಿಗಳೇನು:

*ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆ 2025 ಅನ್ನು ಕೈಬಿಡಬೇಕು. ಕೇಂದ್ರದ ಬಿಎನ್‌ಎಸ್‌ ಕಾಯ್ದೆ ಪ್ರಕಾರ ಸೆಕ್ಷನ್‌ 196 ರಲ್ಲಿ ಈ ಎಲ್ಲಾ ಅಂಶಗಳು ಒಳಗೊಂಡಿರುವುದರಿಂದ ಈ ಮಸೂದೆಯ ತರಾತುರಿ ಏಕೆ? ವಿರೋಧ ಪಕ್ಷಗಳು, ಸಾಮಾಜಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಮತ್ತು ಸಾಮಾಜಿಕ ಜಾಲತಾಣಗಳ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಹೀಗಾಗಿ, ಇದಕ್ಕೆ ತಡೆಯೊಡ್ಡಬೇಕು.

*ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಕಾಯಿತರು, ಕೊಲೆಗಾರರು, ಭೂಮಾಫಿಯಾ ಜತೆ ಸೇರಿ ಪೊಲೀಸರು ಅಪರಾಧ ಎಸಗುವ ಪ್ರಕರಣಗಳು ರಾಜ್ಯವನ್ನು ತಲೆ ತಗ್ಗಿಸುವ ಹಾಗೆ ಮಾಡಿವೆ. 236 ಪೊಲೀಸರು ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಅಮಾನತುಗೊಂಡಿದ್ದಾರೆ. 42 ಪೊಲೀಸರು ಕ್ರಿಮಿನಲ್‌ ಕೇಸ್‌ಗಳಲ್ಲಿ ಭಾಗಿಯಾಗಿರುವ ವರದಿ ಬಂದಿದೆ. ಪೊಲೀಸ್‌ ಕಾನ್‌ಸ್ಟೇಬಲ್ ಇಬ್ಬರು ₹7.11 ಕೋಟಿ ದರೋಡೆಯಲ್ಲಿ ಭಾಗಿಯಾಗಿರುವುದು ಕಾನೂನು ಸುವ್ಯವಸ್ಥೆಗೇ ಕಪ್ಪು ಚುಕ್ಕೆಯಾಗಿದೆ. ಕರ್ನಾಟಕ ಗೂಂಡಾ ರಾಜ್ಯವಾಗಿ ಪರಿವರ್ತನೆಗೊಂಡಿದೆ. ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು.

*ಕೋಗಿಲು ಬಡಾವಣೆಯಲ್ಲಿ ತೆರವುಗೊಂಡಿರುವ ಬಾಂಗ್ಲಾ ದೇಶೀಯರು ಮತ್ತು ರೋಹಿಂಗ್ಯಾ ವಲಸಿಗರಿಗೆ ಮನೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.  ರಾಜ್ಯದಲ್ಲಿ 37 ಲಕ್ಷ ಕುಟುಂಬಗಳು ವಸತಿಗಾಗಿ ಅರ್ಜಿ ಸಲ್ಲಿಸಿವೆ. ಅವರಿಗೆ ಮನೆ ನೀಡಲು ವಿಫಲವಾಗಿರುವ ಸರ್ಕಾರ ಅಕ್ರಮ ವಲಸಿಗರಿಗೆ ಮನೆ ನೀಡಲು ಮುಂದಾಗಿದೆ. ಅದಕ್ಕೆ ತಡೆ ನೀಡಬೇಕು.

*ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದ ಮೇಲೆ ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಯ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಹಾಗೂ ಸೂಕ್ತ ಭದ್ರತೆ ನೀಡಬೇಕು.

ರಾಜ್ಯದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೆ ಜಂಗಲ್‌ರಾಜ್ ಆಗಿರುವುದರ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿಧಾನಸಭೆಯಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ಕಣ್ಣು ಮಿಟುಕಿಸಿದರೆ ಕೈ ತೋರಿಸಿದರೆ ಬಂಧನ ಮಾಡುವಂತಹ ಕಾನೂನು ತರಲು ಮುಂದಾಗಿದ್ದಾರೆ. 1975 ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ ಮಾದರಿಯಲ್ಲೇ ಸಿದ್ದರಾಮಯ್ಯ ತುರ್ತುಪರಿಸ್ಥಿತಿ ಹೇರುತ್ತಿದ್ದಾರೆ
ಆರ್‌.ಅಶೋಕ ವಿರೋಧಪಕ್ಷದ ನಾಯಕ ವಿಧಾನಸಭೆ
ಕೊಲೆ ಬೆದರಿಕೆ ಹಾಕಿದ ಶಾಸಕನನ್ನು ಏಕೆ ಬಂಧಿಸಿಲ್ಲ? ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ರಾಜಶೇಖರ್ ಎಂಬ ವ್ಯಕ್ತಿಯನ್ನು ಅವರದೇ ಪಕ್ಷದ ಶಾಸಕ ಭರತ್ ರೆಡ್ಡಿಯವರ ಗನ್‌ಮ್ಯಾನ್‌ಗಳು ಗುಂಡು ಹಾರಿಸಿ ಕೊಂದಿದ್ದಾರೆ. ಆದರೆ ಈವರೆಗೂ ಶಾಸಕ ಮತ್ತು ಅವರ ಗನ್‌ಮ್ಯಾನ್‌ಗಳನ್ನು ಬಂಧಿಸಿಲ್ಲ. 5 ನಿಮಿಷದಲ್ಲಿ ಜನಾರ್ದನ ರೆಡ್ಡಿ ಮನೆ ಸುಟ್ಟುಬಿಡುತ್ತೇನೆ ಎಂದು ಭರತ್‌ ರೆಡ್ಡಿ ಹೇಳಿದರೂ ಕ್ರಮ ತೆಗೆದುಕೊಳ್ಳಲಿಲ್ಲ. ಇವತ್ತಲ್ಲ ನಾಳೆ ಅವರನ್ನು ಮುಗಿಸುವ ತನಕ ನಿದ್ದೆ ಮಾಡುವುದಿಲ್ಲ ಎಂದು ಹೇಳಿದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದು ದ್ವೇಷ ಭಾಷಣ ಅಲ್ಲವೇ? ಶಾಸಕನ ವಿರುದ್ಧ ಮೊಕದ್ದಮೆ ಏಕೆ ದಾಖಲಿಸಿಲ್ಲ?
ಛಲವಾದಿ ನಾರಾಯಣಸ್ವಾಮಿ ವಿರೋಧಪಕ್ಷದ ನಾಯಕ ವಿಧಾನಪರಿಷತ್‌