ADVERTISEMENT

ಪಾಲಿಕೆ ರಸ್ತೆಗೆ ಟಿಪ್ಪು ಹೆಸರಿಟ್ಟಿದ್ದ ಬಿಜೆಪಿ!

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:41 IST
Last Updated 9 ನವೆಂಬರ್ 2018, 20:41 IST
ಟಿಪ್ಪು ಸುಲ್ತಾನ
ಟಿಪ್ಪು ಸುಲ್ತಾನ   

ಬೆಂಗಳೂರು: ಟಿಪ್ಪು ಸುಲ್ತಾನ್‌ ಒಬ್ಬ ಮತಾಂಧ. ಆತನ ಜಯಂತಿಯನ್ನು ಆಚರಿಸಬಾರದು ಎನ್ನುವುದು ಬಿಜೆಪಿ ನಿಲುವು. ಅಚ್ಚರಿ ಎಂದರೆ ಬಿಜೆಪಿ ಆಡಳಿತಾವಧಿಯಲ್ಲೇ ಪಾಲಿಕೆಯ ರಸ್ತೆಯೊಂದಕ್ಕೆ ಟಿಪ್ಪು ಸುಲ್ತಾನ್‌ ಹೆಸರು ಇಡಲಾಗಿತ್ತು!

ಶಾಂತಕುಮಾರಿ ಅವರು ಮೇಯರ್‌ ಆಗಿದ್ದಾಗ 2015ರ ಏಪ್ರಿಲ್‌ 10ರಂದು ನಡೆದಿದ್ದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.

ವಾರ್ಡ್‌ ನಂಬರ್‌ 119 (ಧರ್ಮರಾಯಸ್ವಾಮಿ ದೇವಸ್ಥಾನ) ಹಾಗೂ ವಾರ್ಡ್‌ ಸಂಖ್ಯೆ 142 (ಸುಂಕೇನಹಳ್ಳಿ) ವ್ಯಾಪ್ತಿಯಲ್ಲಿ ಬರುವ ಕಲಾಸಿಪಾಳ್ಯ ಬಸ್‌ನಿಲ್ದಾಣ ಮತ್ತು ಚಾಮರಾಜಪೇಟೆ 1ನೇ ಮುಖ್ಯ ರಸ್ತೆ ಮೂಲಕ ಮೈಸೂರು ರಸ್ತೆಯನ್ನು ಸೇರುವ ಮುಖ್ಯರಸ್ತೆಗೆ ‘ಟಿಪ್ಪು ಸುಲ್ತಾನ್‌ ಅರಮನೆ ರಸ್ತೆ ’ ಎಂದು ನಾಮಕರಣ ಮಾಡಲಾಗಿತ್ತು.

ADVERTISEMENT

ಆಗ ಆಡಳಿತ ಪಕ್ಷದ ನಾಯಕರಾಗಿದ್ದ ಎನ್‌.ಆರ್‌.ರಮೇಶ್‌ ಮಂಡಿಸಿದ್ದ ನಿರ್ಣಯವನ್ನು ಪದ್ಮನಾಭ ರೆಡ್ಡಿ ಅನುಮೋದಿಸಿದ್ದರು. ಇದಕ್ಕೆ ಸಭೆ ಸರ್ವಾನುಮತದ ಒಪ್ಪಿಗೆ ನೀಡಿತ್ತು. ಬಿಜೆಪಿಯ ಯಾವೊಬ್ಬ ಸದಸ್ಯರೂ ಚಕಾರ ಎತ್ತಿರಲಿಲ್ಲ. ಈ ನಿರ್ಣಯದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಟಿಪ್ಪು ಸುಲ್ತಾನ ಒಬ್ಬ ಮತಾಂಧ. ಹಿಂದೂಗಳ ಕೊಲೆಗಡುಕ. ಆತನ ಹೆಸರಿನಲ್ಲಿ ಜಯಂತಿ ಆಚರಿಸುವುದರಲ್ಲಿ ಅಥವಾ ರಸ್ತೆಗಳಿಗೆ ಆತನ ಹೆಸರಿಡುವುದರಲ್ಲಿ ಅರ್ಥವಿಲ್ಲ. ಅದರ ಬದಲು ಮದಕರಿ ನಾಯಕ, ಎ.ಪಿ.ಜೆ.ಅಬ್ದುಲ್‌ ಕಲಾಂ ಅಂಥವರ ಜಯಂತಿ ಆಚರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಆಡಳಿತಾವಧಿಯಲ್ಲೇ ರಸ್ತೆಯೊಂದಕ್ಕೆ ಟಿಪ್ಪು ಹೆಸರನ್ನು ಇಟ್ಟಿದ್ದ ಬಗ್ಗೆ ಪ್ರಶ್ನಿಸಿದಾಗ, ‘ಎನ್‌.ಆರ್‌.ರಮೇಶ್‌ ಅವರು ಯಾವುದೋ ಒಂದು ನಿರ್ಣಯ ಮಂಡಿಸಿದ್ದರು. ಆದನ್ನು ಸರಿಯಾಗಿ ಗಮನಿಸಿದೆಯೇ ನಾನು ಅನುಮೋದಿಸಿದ್ದೆ. ಆದರೆ, ಟಿಪ್ಪು ಜಯಂತಿಯನ್ನು ನಾನು ಈಗಲೂ ವಿರೋಧಿಸುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.