ಬೆಂಗಳೂರು: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುವಂತಾಗಿದ್ದು, ಶಿಕ್ಷಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಪೂರ್ವ ತಯಾರಿ ಇಲ್ಲದೆ ತರಾತುರಿಯಲ್ಲಿ ಸಮೀಕ್ಷೆ ನಡೆಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವ್ಯವಸ್ಥೆಯಲ್ಲೇ ಏರುಪೇರಾಗಿದೆ. ಶಿಕ್ಷಕರಿಗಂತೂ ಕಿರುಕುಳ ನೀಡಿ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಲಾಗಿದೆ ಎಂದು ದೂರಿದರು.
ರಜೆಗಳನ್ನು ವಿಸ್ತರಿಸಿರುವುದರಿಂದ ಪಾಠ ನಿಂತು ಹೋಗಿವೆ. ವಿದ್ಯಾರ್ಥಿಗಳಿಗೆ ಪ್ರತಿಯೊಂದು ದಿನವೂ ಮುಖ್ಯ. ಸಮೀಕ್ಷೆಯಲ್ಲಿ ತೊಡಗಿರುವ ಶಿಕ್ಷಕಿಯರು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಕಷ್ಟ ಆಲಿಸುವ ವ್ಯವಧಾನ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ವಿಜಯೇಂದ್ರ ಹೇಳಿದರು.
ಈ ಸರ್ಕಾರದಲ್ಲಿ ಎಲ್ಲವೂ ಗೊಂದಲಮಯವಾಗಿದೆ. ಮೊದಲೇ ರೈತರು ಸಂಕಷ್ಟದಲ್ಲಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಮಳೆ ಮತ್ತು ಪ್ರವಾಹದಿಂದ ತತ್ತರಿಸಿದೆ. ಕೃಷಿ ಸಚಿವರು ಅಲ್ಲಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿಲ್ಲ. ಕೃಷಿ ಸಚಿವರಿಗೆ ಅಲ್ಲಿಗೆ ಹೋಗಲು ಪುರುಸೊತ್ತು ಇಲ್ಲವೆಂದಾದರೆ ಸಚಿವರಾಗಿ ಏಕೆ ಇರಬೇಕು. ರೈತರಿಗೆ ಸ್ಪಂದಿಸದೇ ಇದ್ದರೆ ಈ ಸಚಿವರು ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಕಿಡಿಕಾರಿದರು.
‘ಬಿಜೆಪಿ ನಿಯೋಗ ಕಲ್ಯಾಣ ಕರ್ನಾಟಕಕ್ಕೆ ಹೋಗಿರದಿದ್ದರೆ, ಮುಖ್ಯಮಂತ್ರಿಯವರು ಬೆಂಗಳೂರಿನಲ್ಲೇ ಎ.ಸಿ ಕೊಠಡಿಯಲ್ಲಿ ಕುಳಿತು ವಿಡಿಯೊ ಸಂವಾದದ ಮೂಲಕ ಅವಲೋಕನ ಮಾಡುತ್ತಿದ್ದರು. ನಾವು ಎರಡು ತಂಡಗಳಲ್ಲಿ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಬಾಗಲಕೋಟೆ ಪ್ರವಾಸ ಮಾಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಿದೆವು. 10 ದಿನಗಳಲ್ಲಿ ರೈತರಿಗೆ ಪರಿಹಾರ ಮೊತ್ತ ಪಾವತಿಸುವುದಾಗಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ರೈತರು ಇನ್ನೆಷ್ಟು ದಿನ ಕಾಯಬೇಕು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.