ADVERTISEMENT

ಮಳೆಹಾನಿ ಪ್ರದೇಶಕ್ಕೆ ಬಿಜೆಪಿ ಪ್ರವಾಸ: ಬಿ.ವೈ ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 15:41 IST
Last Updated 3 ಸೆಪ್ಟೆಂಬರ್ 2025, 15:41 IST
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ   

ಬೆಂಗಳೂರು: ‘ಬಿಜೆಪಿ ಜಿಲ್ಲಾ ಘಟಕಗಳ ಎಲ್ಲ ಅಧ್ಯಕ್ಷರೂ ತಮ್ಮ ಜಿಲ್ಲೆಗಳಲ್ಲಿ ಸಂಭವಿಸಿರುವ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕು. ಹಾನಿಯ ಕುರಿತು ಸಂಗ್ರಹಿಸಿದ ಪ್ರತ್ಯಕ್ಷ ವರದಿಯನ್ನು ಸೆ. 8ರ ಒಳಗೆ ರಾಜ್ಯ ಕಾರ್ಯಾಲಯಕ್ಕೆ ಸಲ್ಲಿಸಬೇಕು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಪತ್ರ ಬರೆದಿದ್ದಾರೆ.

‘ಹಲವು ದಿನಗಳಿಂದ ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆದರೂ, ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಿಂತಲೂ ದುಪಟ್ಟು ಪರಿಹಾರ ಒದಗಿಸಿದ್ದರು. ಈ ಸರ್ಕಾರ ರೈತರು, ಬಡಜನರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ’ ಎಂದು ದೂರಿದ್ದಾರೆ.

‘ಸಂಕಷ್ಟದ ಸಮಯದಲ್ಲಿ ಮೈಮರೆತು ಗಾಢ ನಿದ್ರೆಯಲ್ಲಿರುವ ಸರ್ಕಾರವನ್ನು ಪ್ರತಿ ಪಕ್ಷ ಬಿಜೆಪಿ ಎಚ್ಚರಿಸುವ ಕೆಲಸ ಮಾಡಬೇಕು. ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಜನರ ಸಂಕಷ್ಟವನ್ನು ಆಲಿಸಬೇಕು. ಹಾನಿಗೊಳಗಾದ ಬೆಳೆ, ಸಾವು–ನೋವು, ರಸ್ತೆಗಳ ಸ್ಥಿತಿ ಸೇರಿದಂತೆ ಎಲ್ಲ ವಿವರಗಳನ್ನು ಚಿತ್ರಸಹಿತ ಪಟ್ಟಿ ಮಾಡಿ ವರದಿ ಸಿದ್ಧಪಡಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.