ADVERTISEMENT

ಕುಕ್ಕರ್ ಬಾಂಬ್‌ ಸಂತ್ರಸ್ತನಿಗೆ ಬಿಜೆಪಿಯಿಂದ ₹ 5 ಲಕ್ಷ ನೆರವು: ಶಾಸಕ ವೇದವ್ಯಾಸ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 12:24 IST
Last Updated 17 ಜನವರಿ 2023, 12:24 IST
 ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ತಮ್ಮನ್ನು ಮಂಗಳವಾರ ಭೇಟಿಯಾದ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಕೈಯಲ್ಲಿನ ಸುಟ್ಟ ಗಾಯಗಳನ್ನು ತೋರಿಸಿದರು. ಶರಣ್‌ ಪಂಪ್‌ವೆಲ್‌, ಭುಜಂಗ ಕುಲಾಲ್ ಇದ್ದಾರೆ - ಪ್ರಜಾವಾಣಿ ಚಿತ್ರ 
 ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ತಮ್ಮನ್ನು ಮಂಗಳವಾರ ಭೇಟಿಯಾದ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಕೈಯಲ್ಲಿನ ಸುಟ್ಟ ಗಾಯಗಳನ್ನು ತೋರಿಸಿದರು. ಶರಣ್‌ ಪಂಪ್‌ವೆಲ್‌, ಭುಜಂಗ ಕುಲಾಲ್ ಇದ್ದಾರೆ - ಪ್ರಜಾವಾಣಿ ಚಿತ್ರ    

ಮಂಗಳೂರು: ‘ನಗರದ ಗರೋಡಿ ಬಳಿ ನ.19ರಂದು ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಬಿಜೆಪಿ ವತಿಯಿಂದ ₹ 5 ಲಕ್ಷ ನೆರವು ನೀಡುತ್ತೇವೆ. ಶಾಸಕನ ನೆಲೆಯಲ್ಲಿ ನಾನು ಹೊಸ ಆಟೋರಿಕ್ಷಾ ಕೊಡಿಸುತ್ತೇನೆ’ ಎಂದು ಶಾಸಕ ಡಿ.ವೇದವ್ಯಾಸ ಕಾಮತ್‌ ಭರವಸೆ ನೀಡಿದರು.

ಪುರುಷೋತ್ತಮ ಪೂಜಾರಿ ಅವರನ್ನು ಮಂಗಳವಾರ ಭೇಟಿಯಾಗಿ ‌ಆರೋಗ್ಯ ವಿಚಾರಿಸಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

‘ಹೊಸ ಟಿವಿಎಸ್‌ ಆಟೊರಿಕ್ಷಾವನ್ನು ಇನ್ನು 12 ದಿನಗಳಲ್ಲೇ ಪುರುಷೋತ್ತಮ ಅವರಿಗೆ ಹಸ್ತಾಂತರಿಸಲಿದ್ದೇವೆ. ಅದೇ ಸಂದರ್ಭದಲ್ಲಿ ₹ 5 ಲಕ್ಷ ನೆರವನ್ನೂ ನೀಡುವವರಿದ್ದೇವೆ’ ಎಂದು.

ADVERTISEMENT

ಪುರುಷೋತ್ತಮ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸುವ ಬದಲು ಅವರ ಮಗಳ ಇಎಸ್‌ಐ ಹಣದಿಂದ ಭರಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ‘ಆಸ್ಪತ್ತೆಯ ಬಿಲ್‌ ನೀವು ಕಟ್ಟಡಬೇಡಿ. ಅದಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ನಾವು ಭರವಸೆ ನೀಡಿದ್ದು ನಿಜ. ಆದರೆ, ಅವರ ಮಗಳ ಇಎಸ್‌ಐ ಹಣ ವ್ಯರ್ಥವಾಗುವುದು ಬೇಡ ಎಂಬ ಕಾರಣಕ್ಕೆ ಅವರಾಗಿಯೇ ಬಿಲ್ ಪಾವತಿ ಮಾಡಿದ್ದಾರೆ’ ಎಂದರು.

ಸರ್ಕಾರದಿಂದ ಕುಟುಂಬಕ್ಕೆ ಇನ್ನೂ ಪರಿಹಾರ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಹೊಸ ರೀತಿಯ ಪ್ರಕರಣ. ಜಿಲ್ಲಾಧಿಕಾರಿಯವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಲಿದ್ದಾರೆ. ಪರಿಹಾರದ ಹಣವೂ ಶೀಘ್ರದಲ್ಲೇ ಸಂತ್ರಸ್ತ ಕುಟುಂಬದ ಕೈಸೇರುವಂತೆ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಅವರು, 'ಸಂತ್ರಸ್ತ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸೆ ವೆಚ್ಚವನ್ನು ಜನಪ್ರತಿನಿಧಿಗಳು ಹಾಗೂ ಪ್ರಮುಖರು ಸೇರಿ ಬಿಜೆಪಿಯಿಂದ ಭರಿಸಲಿದ್ದೇವೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ನ.25ರಂದು ಭರವಸೆ ನೀಡಿದ್ದರು.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಪುರುಷೋತ್ತಮ ಪೂಜಾರಿ ಅವರು, ‘ಚಿಕಿತ್ಸಾ ವೆಚ್ಚವನ್ನು ಮಗಳ ಇಎಸ್‌ಐಯಿಂದ ಭರಿಸಿದ್ದೇವೆ. ಸರ್ಕಾರದಿಂದ ಪರಿಹಾರದ ಹಣ ತಲುಪಿಲ್ಲ’ ಎಂದು ಸೋಮವಾರ ತಿಳಿಸಿದ್ದರು.

ಪಾಲಿಕೆ ಸದಸ್ಯ ಸಂದೀಪ್‌ ಗರೋಡಿ ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಹಕಾರ್ಯವಾಹ ಶರಣ್‌ ಪಂಪ್‌ವೆಲ್‌, ಬಜರಂಗ ದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.