ADVERTISEMENT

ನಮ್ಮ ಕಾರ್ಯಾಲಯ ತೆರೆದ ಬಾಗಿಲು : ಬಿ.ಎಲ್‌.ಸಂತೋಷ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:48 IST
Last Updated 28 ಸೆಪ್ಟೆಂಬರ್ 2025, 23:48 IST
‘ಮಾಸದ ಮಾಧುರ್ಯ 100’ ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತ– ಸ್ವದೇಶಿ ಸಂಕಲ್ಪದ ಅಂಗವಾಗಿ ಬಿ.ವೈ.ವಿಜಯೇಂದ್ರ, ಅಶೋಕ ಹಾರನಹಳ್ಳಿ ಮತ್ತಿತರರು ಪ್ರತಿಜ್ಞೆ ಸ್ವೀಕಾರ ಮಾಡಿದರು.
‘ಮಾಸದ ಮಾಧುರ್ಯ 100’ ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತ– ಸ್ವದೇಶಿ ಸಂಕಲ್ಪದ ಅಂಗವಾಗಿ ಬಿ.ವೈ.ವಿಜಯೇಂದ್ರ, ಅಶೋಕ ಹಾರನಹಳ್ಳಿ ಮತ್ತಿತರರು ಪ್ರತಿಜ್ಞೆ ಸ್ವೀಕಾರ ಮಾಡಿದರು.   

ಬೆಂಗಳೂರು: ಜಗನ್ನಾಥ ಭವನ ಸಾರ್ವಜನಿಕ ಚಟುವಟಿಕೆಗಳಿಗೆ ಬಳಕೆ ಆಗಬೇಕೆಂಬ ಉದ್ದೇಶದಿಂದ ‘ಮಾಸದ ಮಾಧುರ್ಯ’ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ತಿಳಿಸಿದ್ದಾರೆ.

ತೆಲುಗು ವಿಜ್ಞಾನ ಸಮಿತಿಯ ಶ್ರೀಕೃಷ್ಣದೇವರಾಯ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಜಗನ್ನಾಥ ಬಳಗ ಮತ್ತು ಬಿಜೆಪಿ ಸಾಂಸ್ಕೃತಿಕ ಪ್ರಕೋಷ್ಠದ ‘ಮಾಸದ ಮಾಧುರ್ಯ 100’ ಸಂಭ್ರಮಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಗನ್ನಾಥ ಭವನ ಇರುವ ಜಾಗ ದೈವಿಕ ಶಕ್ತಿಗಳಿರುವ ಪ್ರದೇಶ. ಉತ್ತಮ ಫುಡ್‌ ಕಾರ್ನ್‌ರ್‌ಗಳೂ ಇಲ್ಲಿವೆ. ನಮ್ಮ ಸುತ್ತಲಿನ ಜನರು ನಮ್ಮ ಜೊತೆಗೂಡಿಸಲು ಇದು ಪೂರಕವಾಗಿದೆ. ಈ ಕಾರ್ಯಕ್ರಮ ಸದಭಿರುಚಿಯನ್ನು ಹುಟ್ಟು ಹಾಕಿದೆ’ ಎಂದು ಸಂತೋಷ್ ಹೇಳಿದರು.

ADVERTISEMENT

‘ಜನ ಸಾಮಾನ್ಯರು ಪೊಲೀಸರನ್ನು ನಾವು ದೂರ ಇಟ್ಟಿಲ್ಲ. ಜಾತ್ರೆಗಳು ನಡೆದಾಗ ನಮ್ಮ ಕಾರ್ಯಾಲಯ ತೆರೆದ ಬಾಗಿಲು. ಬೇರೆ ರಾಜ್ಯದ ಕಾರ್ಯಾಲಯಗಳಿಗೆ ಹೋಲಿಸಿದರೆ ಜಗನ್ನಾಥ ಭವನ ಸಣ್ಣದಾದರೂ ಅಲ್ಲಿನ ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಕಾರಣಕ್ಕೆ ಆತ್ಮೀಯ ವಾತಾವರಣ ಇದೆ’ ಎಂದು ಹೇಳಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ. ಸಿ.ಎನ್. ಅಶ್ವಥನಾರಾಯಣ, ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಪಾಲ್ಗೊಂಡಿದ್ದರು.

Cut-off box - ‘ಸಾಹಿತ್ಯ ಕಲೆ ಗೊತ್ತಿಲ್ಲದಿದ್ದರೆ ಪ್ರಾಣಿಗೆ ಸಮಾನ’ ‘ರಾಜಕೀಯ ಜಂಜಾಟದಿಂದ ಹೊರಬರಲು ಕಲೆ ಸಂಸ್ಕೃತಿ ಸಂಗೀತದ ಅಭಿರುಚಿ ಬೆಳೆಸಿಕೊಂಡರೆ ನಾವು ಉತ್ಸಾಹ ಲವಲವಿಕೆಯಿಂದ ಕೆಲಸ ಮಾಡಲು ಸಾಧ್ಯ. ಸಾಹಿತ್ಯ ಸಂಗೀತ ಕಲೆ ಗೊತ್ತಿಲ್ಲದೇ ಇದ್ದರೆ ಪ್ರಾಣಿಗೆ ಸಮಾನ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಜಗನ್ನಾಥ ಬಳಗ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ವತಿಯಿಂದ ಹಮ್ಮಿಕೊಂಡಿದ್ದ ಮಾಸದ ಮಾಧುರ್ಯ 100 ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಮಾಸದ ಮಾಧುರ್ಯದ ಮೂಲಕ ಜಗನ್ನಾಥ ಭವನವು ಕೇವಲ ರಾಜಕೀಯ ಚಟುವಟಿಕೆಗಳಿಗೆ ಸೀಮಿತವಾಗದೇ ಕಲೆ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ಕೇಂದ್ರವಾಗಿದೆ. ರಾಷ್ಟ್ರಿಯ ಸ್ವಯಂಸೇವಕ ಸಂಘದ 100 ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ‘ಮಾಸದ ಮಾಧುರ್ಯ’ 100 ರ ಸಂಭ್ರಮ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾನು ರಾಜ್ಯದ ಅಧ್ಯಕ್ಷನಾಗಿ ಜವಾಬ್ದಾರಿ ಹೊತ್ತಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.