ADVERTISEMENT

ಶಿಲೀಂಧ್ರ ಸೋಂಕಿಗೆ ಕನ್ನಡಿಗನ ಚುಚ್ಚುಮದ್ದು

ಮುಂಬೈನ ಭಾರತ್ ಸೀರಂ ಕಂಪನಿಯಲ್ಲಿ ಶ್ರೀಕಾಂತ್ ಪೈ ಸಾಧನೆ

ಗುರು ಪಿ.ಎಸ್‌
Published 24 ಮೇ 2021, 20:54 IST
Last Updated 24 ಮೇ 2021, 20:54 IST
ಶ್ರೀಕಾಂತ ಪೈ
ಶ್ರೀಕಾಂತ ಪೈ   

ಬೆಂಗಳೂರು: ಕೋವಿಡ್‌ ನಂತರ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿರುವ ಮ್ಯೂಕರ್‌ಮೈಕೊಸಿಸ್‌ (ಕಪ್ಪು ಶಿಲೀಂಧ್ರ) ಸಮಸ್ಯೆಗೆ ಲೈಪೊಸೋಮಲ್‌ ಅ್ಯಂಫೊಟೆರಿಸಿನ್‌ ಚುಚ್ಚುಮದ್ದು ರಾಮಬಾಣದಂತೆ ಕೆಲಸ ಮಾಡುತ್ತಿದೆ. ಈ ಉತ್ಪನ್ನವನ್ನು ಅಭಿವೃದ್ಧಿ ಪಡಿಸಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಬಿ.ಶ್ರೀಕಾಂತ ಅಣ್ಣಪ್ಪ ಪೈ.

ಭಾರತ್‌ ಸೀರಂ ಕಂಪನಿಯಲ್ಲಿ 17 ವರ್ಷ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿರುವ ಶ್ರೀಕಾಂತ ಪೈಯವರು ಅ್ಯಂಫೊಟೆರಿಸಿನ್‌ ಉತ್ಪನ್ನ ಕಂಡು ಹಿಡಿದಾಗ ಕಂಪನಿಯ ಅಭಿವೃದ್ಧಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದರು. ಶಿಲೀಂಧ್ರ ಸೋಂಕಿನಿಂದ ಸಾರ್ವಜನಿಕರನ್ನು ರಕ್ಷಿಸುವ ಉದ್ದೇಶದಿಂದ ಈ ಉತ್ಪನ್ನವನ್ನು ಅಭಿವೃದ್ಧಿ ಪಡಿಸಿದ್ದರು. ಈಗ ಅದು ಕಪ್ಪು ಶಿಲೀಂಧ್ರ ಸಮಸ್ಯೆಯಿಂದ ಬಳಲುತ್ತಿರುವವರ ಜೀವರಕ್ಷಕದಂತೆ ಕೆಲಸ ಮಾಡುತ್ತಿದೆ.

‘ಅ್ಯಂಫೊಟೆರಿಸಿನ್‌ನ ಮೂಲ ಉತ್ಪಾದಕರು ಅಮೆರಿಕದ ಗಿಲಿಯಡ್‌ ಸೈನ್ಸಸ್‌ ಕಂಪನಿ. ಆದರೆ, ಈ ಉತ್ಪನ್ನದ ಹಕ್ಕುಸ್ವಾಮ್ಯದ ಅವಧಿ 2008ರಲ್ಲಿ ಮುಕ್ತಾಯವಾಗಿತ್ತು. ಹಕ್ಕುಸ್ವಾಮ್ಯ ಅವಧಿ ಮುಗಿದ ಮರುದಿನದಿಂದಲೇ ಯಾರು ಬೇಕಾದರೂ ಇಂತಹ ಉತ್ಪನ್ನವನ್ನು ತಯಾರಿಸಬಹುದು. ಆದರೆ, ಭಾರತದಲ್ಲಿ ಇದನ್ನು ಉತ್ಪಾದಿಸುವ ತಂತ್ರಜ್ಞಾನ ಇರಲಿಲ್ಲ. ಇದಕ್ಕೆ ಸಾಕಷ್ಟು ಸಮಯ ಮತ್ತು ಅಧ್ಯಯನ ಬೇಕಾಗುತ್ತದೆ. ಎರಡು ವರ್ಷಗಳ ಸತತ ಪರಿಶ್ರಮದ ನಂತರ 2010–2011ರಲ್ಲಿ ನಾನು ಮತ್ತು ನನ್ನ ತಂಡ ಈಉತ್ಪನ್ನವನ್ನು ಮರುಅಭಿವೃದ್ಧಿ ಪಡಿಸಿದೆವು‘ ಎಂದು ಶ್ರೀಕಾಂತ ಪೈ ’ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಉತ್ಪನ್ನದ ಮರು ಅಭಿವೃದ್ಧಿಗೆ ಸಂಬಂಧಿಸಿದಂತೆ ಆ ಸಂದರ್ಭದಲ್ಲಿ ಯಾವುದೇ ಮಾರ್ಗಸೂಚಿ ಇರಲಿಲ್ಲ. ಇದನ್ನು ಮತ್ತೆ ಉತ್ಪಾದಿಸಲು ಅಮೆರಿಕದ ಫುಡ್‌ ಅಂಡ್‌ ಡ್ರಗ್‌ ಅಡ್ಮನಿಸ್ಟ್ರೇಷನ್‌ (ಎಫ್‌ಡಿಎ) ಹಾಗೂ ಯುರೋಪಿಯನ್‌ ಮೆಡಿಕಲ್ ಏಜೆನ್ಸಿಯವರ ಅನುಮತಿ ಪಡೆಯಬೇಕಿತ್ತು. ಅವರು ಈ ಉತ್ಪನ್ನ ಸರಿ ಇದೆಯೋ, ಇಲ್ಲವೋ ಎಂದು ಹೇಳುತ್ತಾರೆಯೇ ವಿನಾ ತಂತ್ರಜ್ಞಾನದ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಳ್ಳುವುದಿಲ್ಲ. ಮೂಲ ಉತ್ಪನ್ನದ ಸೂತ್ರದ (ಫಾರ್ಮುಲಾ) ಆಧಾರದ ಮೇಲೆ ವೈದ್ಯಕೀಯ ಪ್ರಯೋಗ (ಕ್ಲಿನಿಕಲ್ ಟ್ರಯಲ್‌) ನಡೆಸಿ ಉತ್ಪನ್ನ ತಯಾರಿಸಿದ್ದೆವು’ ಎಂದರು.

‘ದೇಹದಲ್ಲಿ ಶಿಲೀಂಧ್ರ ಸೋಂಕು ಮೊದಲು ದಾಳಿ ಮಾಡುವುದು ಶ್ವಾಸಕೋಶ, ಯಕೃತ್ತು ಹಾಗೂ ಉದರದೊಳಗಿನ ತೊರಳೆ (ಸ್ಪ್ಲೀನ್‌) ಮೇಲೆ. ಈ ಚುಚ್ಚುಮದ್ದು ಮೂರು ಭಾಗಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ’ ಎಂದರು.

‘ಅಂಫೊಟೆರಿಸಿನ್‌ ಬಿ ಯು ಚುಚ್ಚುಮದ್ದುಗಳ ಮೂಲವಾಗಿದ್ದು, ಸಾರ್ವಜನಿಕವಾಗಿ ಲಭ್ಯವಿರುತ್ತದೆ. ಇದನ್ನು ಬಳಸಿಕೊಂಡು ನಾಲ್ಕು ಬಗೆಯ ಚುಚ್ಚುಮದ್ದುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮೊದಲನೆಯದು ಸಾಂಪ್ರದಾಯಿಕ ಉತ್ಪನ್ನ. ಎರಡನೇಯದು ಲೈಪೊಸೋಮಲ್‌ ಅಂಫೊಟೆರಿಸಿನ್‌ ಇಂಜೆಕ್ಷನ್‌ ಆಗಿದ್ದು ಇದು, ಸಾಮಾನ್ಯ ಇಂಜೆಕ್ಷನ್‌ಗಿಂತ 75 ಪಟ್ಟು ಹೆಚ್ಚು ಪರಿಣಾಮಕಾರಿ. ಮೂರನೆಯದು ಲಿಪಿಡ್‌ ಕಾಂಪ್ಲೆಕ್ಸ್‌. ಇದು ಎರಡನೆಯದ್ದಕ್ಕಿಂತ 20 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇನ್ನು, ಅಂಫೊಟೆರಿಸಿನ್‌ ಎಮಲ್ಷನ್‌, ಸಾಮಾನ್ಯ ಇಂಜೆಕ್ಷನ್‌ಗಿಂತ 150 ಪಟ್ಟು ಹೆಚ್ಚು ಸುರಕ್ಷಿತವಾಗಿದೆ’ ಎಂದರು.

ಲಿಪಿಡ್‌ ಕಾಂಪ್ಲೆಕ್ಸ್‌ ಮತ್ತು ಅ್ಯಂಫೊಟೆರಿಸಿನ್‌ ಎಮಲ್ಷನ್‌ ಉತ್ಪನ್ನದ ಹಕ್ಕುಸ್ವಾಮ್ಯ ಶ್ರೀಕಾಂತ್‌ ಅವರ ಹೆಸರಿನಲ್ಲಿಯೇ ಇದೆ.

ಕುಂದಾಪುರದ ಕುಡಿ
ಬೆಂಗಳೂರಿನ ಸರ್ಕಾರಿ ಫಾರ್ಮಸಿ ಕಾಲೇಜಿನಲ್ಲಿ 1975ರಲ್ಲಿ ಬಿ.ಫಾರ್ಮಾ ಪೂರೈಸಿದ ಶ್ರೀಕಾಂತ್‌ ಪೈ ಅವರು, 1977ರಲ್ಲಿ ಮಣಿಪಾಲ್‌ ಫಾರ್ಮಸಿ ಕಾಲೇಜಿನಲ್ಲಿ ಎಂ.ಫಾರ್ಮಾ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘1977ರ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳು ಕಡಿಮೆ ಇದ್ದವು. ಮುಂಬೈನಲ್ಲಿ ಸಹೋದರಿಯ ಮನೆ ಇದ್ದುದರಿಂದ ಅಲ್ಲಿಯೇ ಕೆಲಸಕ್ಕಾಗಿ ತೆರಳಿದೆ. ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಭಾರತ್ ಸೀರಂ ಕಂಪನಿಗೆ ಸೇರಿ 17 ವರ್ಷ ಕೆಲಸ ಮಾಡಿದ್ದೇನೆ’ ಎಂದ ಪೈ ಅವರು, ಸದ್ಯ ಮುಂಬೈನಲ್ಲಿಯೇ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.

ಶಸ್ತ್ರಚಿಕಿತ್ಸೆ ವೇಳೆ ರೋಗಿಯ ಪ್ರಜ್ಞೆ ತಪ್ಪಿಸಲು (ಅನಸ್ತೇಶಿಯಾ) ಬಳಸುವ ಪ್ರೊಟೊಕಾಲ್ ಚುಚ್ಚುಮದ್ದು ಸೇರಿದಂತೆ ವಿವಿಧ ಔಷಧ ಉತ್ಪನ್ನಗಳಿಗೆ ಸಂಬಂಧಿಸಿದ 16 ಹಕ್ಕುಸ್ವಾಮ್ಯಗಳು ಶ್ರೀಕಾಂತ್ ಪೈ ಹೆಸರಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.