ADVERTISEMENT

ಮುನಿರತ್ನ ಗೋದಾಮಿನ ಮುಂದೆ ಮಹಾಸ್ಫೋಟ!

​ಪ್ರಜಾವಾಣಿ ವಾರ್ತೆ
Published 19 ಮೇ 2019, 20:08 IST
Last Updated 19 ಮೇ 2019, 20:08 IST
   

ಬೆಂಗಳೂರು: ವೈಯಾಲಿಕಾವಲ್ ಸಮೀಪದ ಈಜುಕೊಳ ಬಡಾವಣೆ ರಸ್ತೆಯಲ್ಲಿರುವ ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಅವರ ಗೋದಾಮಿನ ಬಳಿ ಭಾನುವಾರ ಬೆಳಿಗ್ಗೆ ರಾಸಾಯನಿಕ ವಸ್ತುವಿದ್ದ ಕ್ಯಾನ್ ಸ್ಫೋಟಗೊಂಡು, ಅವರ ಮನೆ ಕೆಲಸಗಾರ ವೆಂಕಟೇಶ್ (55) ಮೃತಪಟ್ಟಿದ್ದಾರೆ.

ಬೆಳಿಗ್ಗೆ 9.15ಕ್ಕೆ ಈ ದುರಂತ ಸಂಭವಿಸಿದ್ದು, ಆರಂಭದಲ್ಲಿ ಬಾಂಬ್ ಸ್ಫೋಟದ ವದಂತಿ ಹಬ್ಬಿ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು ಬೆಚ್ಚಿಬಿದ್ದಿದ್ದರು. ಪೊಲೀಸರು ಸ್ಥಳಕ್ಕೆ ಬಂದ ಬೆನ್ನಲ್ಲೇ ಶ್ವಾನದಳ, ಬಾಂಬ್‌ ನಿಷ್ಕ್ರಿಯ ದಳ, ಎಫ್‌ಎಸ್‌ಎಲ್, ಎನ್‌ಐಎ, ಗರುಡಾ ಪಡೆಗಳೂ ದೌಡಾಯಿಸಿದವು. ಈ ಬೆಳವಣಿಗೆ ಜನರ ಆತಂಕವನ್ನು ಇನ್ನಷ್ಟು ತೀವ್ರಗೊಳಿಸಿತು.

ನಾಲ್ಕು ತಾಸುಗಳ ಸುದೀರ್ಘ ತಪಾಸಣೆ ಬಳಿಕ ಮಾಧ್ಯಮದವರ ಮುಂದೆ ಬಂದ ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ , ‘ಇದು ಬಾಂಬ್ ಸ್ಫೋಟವಲ್ಲ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ರಾಸಾಯನಿಕ ವಸ್ತು ತುಂಬಿದ್ದ ಕ್ಯಾನ್ ತೆಗೆದುಕೊಂಡು ಹೋಗುತ್ತಿದ್ದಾಗ ಅದು ಸ್ಫೋಟಗೊಂಡಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಎಡವಿದ್ದಕ್ಕೇ ಸ್ಫೋಟ!: ಮಡಿವಾಳ ಸಮುದಾಯದ ವೆಂಕಟೇಶ್, ಪತ್ನಿ ಹಾಗೂ ಮೂವರು ಮಕ್ಕಳ ಜತೆ ಧೋಬಿ ಘಾಟ್ ಬಳಿ ವಾಸವಿದ್ದರು. ಹಲವು ದಶಕಗಳಿಂದ ಮುನಿರತ್ನ ಕುಟುಂಬಕ್ಕೆ ಆಪ್ತರಾಗಿದ್ದ ವೆಂಕಟೇಶ್, ಅವರ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನೂ ಮಾಡುತ್ತಿದ್ದರು. ಗೋದಾಮಿನಿಂದ ಕೂಗಳತೆ ದೂರದಲ್ಲೇ ಮುನಿರತ್ನ ಅವರ ಮನೆ ಇದೆ.

‘ಗೋದಾಮಿನ ನಾಲ್ಕನೇ ಮಹಡಿಯಲ್ಲಿ ನವಿಲುಗಳ ಆಕೃತಿ ತಯಾರಿಸಲಾಗುತ್ತಿತ್ತು. ಅದಕ್ಕೆ ಮಿಥೈಲ್ ಈಥೈಲ್ ಕೆಟೋನ್ ಎಂಬ ರಾಸಾಯನಿಕ ವಸ್ತು ಬಳಸಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ವೆಂಕಟೇಶ್ ಅವರು ಹೈದರಾಬಾದ್‌ನಿಂದ 30 ಟಿನ್ ರಾಸಾಯನಿಕ ತರಿಸಿ ಅದನ್ನು ಮಹಡಿಯ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದರು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈವರೆಗೆ 29 ಟಿನ್‌ಗಳನ್ನು ಬಳಸಿ ಆಕೃತಿಗಳನ್ನು ತಯಾರಿಸಿದ್ದ ವೆಂಕಟೇಶ್, ಇನ್ನೊಂದನ್ನು ಬಳಸದೆ ತುಂಬ ದಿನಗಳಿಂದ ಹಾಗೇ ಬಿಟ್ಟಿದ್ದರು. ಭಾನುವಾರ ಬೆಳಿಗ್ಗೆ 9.15ರ ಸುಮಾರಿಗೆ ಮನೆಯಿಂದ ಗೋದಾಮಿಗೆ ಬಂದ ಅವರು, ಮಹಡಿಗೆ ತೆರಳಿ ಆ ಟಿನ್ ತೆಗೆದುಕೊಂಡು ಕೆಳಗೆ ಬಂದಿದ್ದರು.’

‘ಮೊಬೈಲ್‌ನಲ್ಲಿ ಮಾತನಾಡಿ ಕೊಂಡೇ ರಸ್ತೆಗೆ ಬಂದ ಅವರು, ಗೋದಾಮಿನ ಎದುರೇ ಎಡವಿ ಬಿದ್ದರು. ಈ ವೇಳೆ ಟಿನ್‌ನಲ್ಲಿದ್ದ ರಾಸಾಯನಿಕ ವಸ್ತು ಕುಲುಕಿದ್ದರಿಂದ, ಅದು ಸ್ಫೋಟಗೊಂಡು ವೆಂಕಟೇಶ್ ದೇಹ ಛಿದ್ರಗೊಂಡಿತು. ಎಡಗೈನಲ್ಲಿದ್ದ ಮೊಬೈಲ್ ಕೂಡ ಸ್ಫೋಟಿಸಿದ್ದರಿಂದ ಕೈ ತುಂಡಾಯಿತು. ಅಲ್ಲೇ ಇದ್ದ ಕ್ಯಾಬ್ ಚಾಲಕನೊಬ್ಬ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ. ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿ ಗುಂಡಿ ಬಿದ್ದಿದ್ದರಿಂದ, ಭಯೋತ್ಪಾದಕ ಕೃತ್ಯ ಇರಬಹುದೆಂದು ನಾವೂ ಸಂಶಯ‍ಪಟ್ಟಿದ್ದೆವು’ ಎಂದು ಹೇಳಿದರು.

ಬಾಲ್ಯದ ನಂಟು: ವೆಂಕಟೇಶ್ ತಂದೆ ಹಾಗೂ ಮುನಿರತ್ನ ತಂದೆ ಬಾಲ್ಯ ಸ್ನೇಹಿತರಾಗಿದ್ದರು. ಆ ಪೀಳಿಗೆಯ ನಂತರ ಅವರ ಮಕ್ಕಳೂ ಆಪ್ತ ಗೆಳೆಯರಾಗಿದ್ದರು. ಯಾವಾಗಲೂ ಶಾಸಕರ ಜತೆಗೇ ಇರುತ್ತಿದ್ದ ವೆಂಕಟೇಶ್, ಮೊದಲು ಗೋದಾಮಿನ ಎದುರುಗಡೆಯ ಮನೆಯಲ್ಲೇ ನೆಲೆಸಿದ್ದರು. ಅದೇ ಜಾಗದಲ್ಲಿ ಹೊಸ ಮನೆ ಕಟ್ಟಿಸುವ ಸಲುವಾಗಿ, ಇತ್ತೀಚೆಗೆ ‌ವಾಸ್ತವ್ಯವನ್ನು ಧೋಬಿ ಘಾಟ್ ಪಕ್ಕದ ಕಟ್ಟಡಕ್ಕೆ ಬದಲಾಯಿಸಿದ್ದರು.

ತನಿಖಾ ವರದಿ ಬರಲಿ: ‘ವೆಂಕಟೇಶ್ ಡ್ರೈ ಕ್ಲೀನಿಂಗ್ ಜತೆಗೆ, ತಾನೇ ಆರ್ಡರ್ ಪಡೆದು ಪಕ್ಷಿಗಳ ಆಕೃತಿ ತಯಾರಿಸುತ್ತಿದ್ದ. ರಾಸಾಯನಿಕ ವಸ್ತುವಿನಿಂದಲೇ ಸ್ಫೋಟಗೊಂಡಿದೆ ಎಂದು ನಾನು ಈಗಲೇ ಹೇಳುವುದಿಲ್ಲ. ತನಿಖಾ ವರದಿಗಾಗಿ ಕಾಯುತ್ತಿದ್ದೇನೆ’ ಎಂದು ಶಾಸಕ ಮುನಿರತ್ನ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಶನಿವಾರ ರಾತ್ರಿ ತಡವಾಗಿ ಮನೆಗೆ ಬಂದಿದ್ದರಿಂದ ಬೆಳಿಗ್ಗೆ ಗಾಢ ನಿದ್ರೆಯಲ್ಲಿದ್ದೆ. ಸ್ಫೋಟದ ಶಬ್ದವೂ ನನಗೆ ಕೇಳಿಸಲಿಲ್ಲ. ಕುಟುಂಬ ಸದಸ್ಯರು ಬಂದು, ‘ಮನೆ ಹತ್ತಿರ ಬ್ಲಾಸ್ಟ್ ಆಗಿ, ವೆಂಕಟೇಶ್ ಸತ್ತಿದ್ದಾನೆ’ ಎಂದರು. ನಂಬಲಾಗಲಿಲ್ಲ. ಪೊಲೀಸರಿಗೆ ಕರೆ ಮಾಡಿಕೊಂಡೇ ಸ್ಥಳಕ್ಕೆ ಓಡಿದೆ. ಅಷ್ಟರಲ್ಲಾಗಲೇ ಸಿಲಿಂಡರ್ ಸ್ಫೋಟ, ಬಾಂಬ್ ಸ್ಫೋಟ... ಎಂದೆಲ್ಲ ಸುದ್ದಿ ಹಬ್ಬಿತ್ತು. ಯಾವುದೇ ಊಹಾ–ಪೋಹ ಬೇಡ. ಸಮಗ್ರವಾಗಿ ತನಿಖೆ ನಡೆಸುವಂತೆ ಪೊಲೀಸರಲ್ಲಿ ವಿನಂತಿಸಿದ್ದೇನೆ’ ಎಂದರು.

ಗೋದಾಮಿನ ಎತ್ತರಕ್ಕೆ ಚಿಮ್ಮಿದ ಮಣ್ಣು!

‘ಆಗಷ್ಟೇ ಅಂಗಡಿ ಬಾಗಿಲು ತೆಗೆದು ಅಂಗಳಕ್ಕೆ ನೀರು ಹಾಕುತ್ತಿದ್ದೆ. ಬಾಂಬ್ ಸ್ಫೋಟಗೊಂಡಂತೆ ಜೋರಾಗಿ ಶಬ್ದ ಬಂತು. ಗೋದಾಮಿನ ಎತ್ತರಕ್ಕೇ ಮಣ್ಣು ಚಿಮ್ಮಿತ್ತು. ಇಡೀ ವಾತಾವರಣದಲ್ಲಿ ದೂಳು ಆವರಿಸಿದ್ದರಿಂದ ಏನೂ ಕಾಣಿಸುತ್ತಿರಲಿಲ್ಲ. ಆ ಭಯಾನಕ ಸದ್ದಿನಿಂದ ಸ್ಥಳೀಯರೆಲ್ಲ ಚೀರಿಕೊಂಡು ಮನೆಗಳಿಂದ ಹೊರಗೆ ಓಡಿ ಬಂದರು. ದೂಳು ಹೋದ ಮೇಲೆ ಸ್ಥಳಕ್ಕೆ ಹೋಗಿ ನೋಡಿದರೆ ವೆಂಕಟೇಶ್ ದೇಹ ಛಿದ್ರ ಛಿದ್ರವಾಗಿ ಬಿದ್ದಿತ್ತು....’

ಇದು ಘಟನಾ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲೇ ಇರುವ ‘ಲಕ್ಷ್ಮಿ ಎಂಟರ್‌ಪ್ರೈಸಸ್’ ಅಂಗಡಿಯ ಮಾಲೀಕ ಆನಂದ್ ಅವರು ಘಟನೆಯನ್ನು ವಿವರಿಸಿದ ಪರಿ.

‘ವೆಂಕಟೇಶ್ ಹಲವು ವರ್ಷಗಳಿಂದ ಪರಿಚಿತರು. ನಿತ್ಯ ನಮ್ಮ ಅಂಗಡಿಗೆ ಬಂದು ಹೋಗುತ್ತಿದ್ದರು. ಸ್ಫೋಟದಲ್ಲಿ ಅವರ ಮುಖ ಗುರುತು ಸಿಗಲಾರದಷ್ಟು ಮಟ್ಟಕ್ಕೆ ಛಿದ್ರಗೊಂಡಿತ್ತು. ಅಕ್ಕ–ಪಕ್ಕದ ಮನೆಗಳ ಗೋಡೆಗಳೂ ಬಿರುಕು ಬಿಟ್ಟಿ ದ್ದವು. ಹಿಂದೆ ಉಗ್ರರು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ್ದರಿಂದ, ಅವರೇ ಇಲ್ಲೂ ಕೃತ್ಯ ಎಸಗಿರಬಹುದು ಎಂದು ಕೊಂಡಿ ದ್ದೆವು. ಉಗ್ರರ ಕೈವಾಡವಲ್ಲ ಎಂದು ಈಗ ಗೊತ್ತಾಯಿತು’ ಎನ್ನುತ್ತ ನಿಟ್ಟುಸಿರುಬಿಟ್ಟರು.

ಆರೋಪಿಗಳ ಸ್ಥಾನ ಖಾಲಿ ಖಾಲಿ!

ಸ್ಫೋಟಕ ವಸ್ತುಗಳ ಕಾಯ್ದೆ-1908, ಸಾರ್ವಜನಿಕ ಸ್ವತ್ತಿಗೆ ಹಾನಿ ಪ್ರತಿಬಂಧಕ ಕಾಯ್ದೆ-1984 ಹಾಗೂ ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಆರೋಪಗಳಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಸ್ಥಾನದಲ್ಲಿ ಯಾರ ಹೆಸರನ್ನೂ ನಮೂದಿಸಿಲ್ಲ.‘ನಿಯಮದ ಪ್ರಕಾರ ಕಟ್ಟಡದ ಮಾಲೀಕನ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಮೃತರ ಕುಟುಂಬ ಸದಸ್ಯರು ದೂರು ಕೊಟ್ಟರೆ, ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

ರಾಯಚೂರಿನ ಸ್ಫೋಟಕ್ಕೆ ಸಾಮ್ಯತೆ

‘ಈ ಸ್ಫೋಟಕ್ಕೂ 2018ರ ಅ.5ರಂದು ರಾಯಚೂರಿನಲ್ಲಿ ‌ಸಂಭವಿಸಿದ್ದ ರಾಸಾಯನಿಕ ಸ್ಫೋಟಕ್ಕೂ ಸಾಮ್ಯತೆ ಇದೆ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘‍ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ರಾಯಚೂರಿನ ಬಡಾವಣೆ ಒಂದರಲ್ಲಿ ಚಿಂದಿ ಆಯುತ್ತಿದ್ದ ಅನಂತಮ್ಮ ಎಂಬುವರಿಗೆ ಕಸದ ರಾಶಿಯಲ್ಲಿ ನೀಲಿ ಬಣ್ಣದ ಡಬ್ಬಿ ಸಿಕ್ಕಿತ್ತು. ಅದರಲ್ಲಿದ್ದ ದ್ರವ ರೂಪದ ವಸ್ತುವನ್ನು ಸ್ವಚ್ಛಗೊಳಿಸುತ್ತಿದ್ದಾಗ ಸ್ಫೋಟ ಸಂಭವಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ನಮ್ಮ ತಂಡವೇ ಸ್ಥಳ ಪರಿಶೀಲನೆ ನಡೆಸಿತ್ತು. ಪ್ಲಾಸ್ಟರ್ ಆಫ್ ಪ್ಯಾರಿಸ್ ಬೊಂಬೆ ತಯಾರಿಕಾ ಕಾರ್ಖಾನೆಯ ನೌಕರರು ಆ ಕ್ಯಾನನ್ನು ಅಲ್ಲಿ ಎಸೆದಿದ್ದರು ಎಂಬುದು ಖಚಿತವಾಗಿತ್ತು’ ಎಂದರು.

‘16 ಡಿಗ್ರಿಗಿಂತ ಹೆಚ್ಚು ತಾಪಮಾನವಿದ್ದರೂ ಈ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಹಾಗೆಯೇ, ಹೆಚ್ಚು ಕುಲುಕಿಸಿದರೆ ಸ್ಫೋಟವೇ ಸಂಭವಿಸುತ್ತದೆ. ಎರಡೂ ಪ್ರಕರಣಗಳಲ್ಲೂ ಕ್ಯಾನ್ ಅಲುಗಾಡಿಸಿದ್ದೇ ದುರಂ ತಕ್ಕೆ ಕಾರಣವಾಗಿದೆ. ಯುರೋಪ್‌ನ ಕೆಲವೆಡೆ ಬಾಂಬ್ ಸ್ಫೋಟಕ್ಕೂ ಇದೇ ರಾಸಾಯನಿಕ ಬಳಕೆಯಾಗಿತ್ತು’ ಎಂದು ಮಾಹಿತಿ ನೀಡಿದರು.

ಕಂಬಗಳ ಮೇಲೆ ನವಿಲು

‘ಕೆಲ ಪಾಲಿಕೆ ಸದಸ್ಯರು ಪಾರ್ಕ್‌ಗಳ ಅಂದ ಹೆಚ್ಚಿಸುವ ಸಲುವಾಗಿ ಅಲ್ಲಿನ ವಿದ್ಯುತ್ ಕಂಬಗಳ ಮೇಲೆ ಪಕ್ಷಿಗಳ ಆಕೃತಿಗಳನ್ನು ಹಾಕಿಸುತ್ತಿದ್ದಾರೆ. ಆ ಆಕೃತಿಗಳನ್ನು ವೆಂಕಟೇಶ್ ಮಾಡಿಕೊಡುತ್ತಿದ್ದರು. ಈಗಾಗಲೇ ಜೆ.‍ಪಿ.ಪಾರ್ಕ್‌ನ ಕಂಬಗಳ ಮೇಲೆ ನವಿಲುಗಳ ಆಕೃತಿಗಳನ್ನು ಅಳವಡಿಸಲಾಗಿದ್ದು, ಕೆಲವಡೆ ರಸ್ತೆ ಬದಿಯ ಕಂಬಗಳ ಮೇಲೂ ಹಾಕಲಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.