ADVERTISEMENT

ದೇವಸ್ಥಾನಗಳ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಸಲ್ಲದು; ಚಿಂತಕ ಡೇವಿಡ್‌ ಫ್ರಾಲಿ

ಆಧ್ಯಾತ್ಮಕ ಚಿಂತಕ ಡೇವಿಡ್‌ ಫ್ರಾಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 9:08 IST
Last Updated 27 ಅಕ್ಟೋಬರ್ 2018, 9:08 IST
   

ಬೆಂಗಳೂರು: ‘ದೇವಸ್ಥಾನಗಳ ವಿಚಾರದಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದನ್ನು ಒಪ್ಪಲಾಗದು’ ಎಂದು ಆಧ್ಯಾತ್ಮಿಕ ಚಿಂತಕ ಡೇವಿಡ್ ಫ್ರಾಲಿ ಅಭಿಪ್ರಾಯ ಪಟ್ಟರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ಅವರು ‘ನಾನು ಹೇಗೆ ಹಿಂದೂ ಆದೆ’ ಎಂಬ ಕುರಿತುಮಾತನಾಡಿದರು.

‘ಹಿಂದೂ ದೇವಸ್ಥಾನಗಳಿಗೆ ಸುದೀರ್ಘ ಇತಿಹಾಸವಿದೆ. ಅವುಗಳ ಸಂಪ್ರದಾಯ ಸಮೃದ್ಧವಾದುದು. ಅವುಗಳನ್ನು ಸಂರಕ್ಷಿಸುವ ಅಗತ್ಯವಿದೆ’ ಎಂದರು.

ADVERTISEMENT

‘ನಾನೊಬ್ಬ ಕ್ಯಾಥೋಲಿಕ್‌ ಕ್ರಿಶ್ಚಿಯನ್‌ ಆಗಿದ್ದೆ. ನನ್ನ ಎಳೆಯ ಪ್ರಾಯದಲ್ಲೇ ಪಾಶ್ಚಿಮಾತ್ಯ ವಿಚಾರಗಳಲ್ಲೇನೋ ಕೊರತೆ ಇದೆ ಅನಿಸತೊಡಗಿತು. ಪೂರ್ವದ ಆಧ್ಯಾತ್ಮಿಕ ವಿಚಾರಧಾರೆ ನನ್ನನ್ನು ಆಕರ್ಷಿಸಿತು. ನನ್ನನ್ನು ಕಾಡುತ್ತಿದ್ದ ಅನೇಕ ಪ್ರಶ್ನೆಗಳಿಗೆ ಇಲ್ಲಿನ ಯೋಗ, ವೇದಾಂತ, ಉಪನಿಷತ್‌ಗಳಲ್ಲಿ ಉತ್ತರ ಸಿಕ್ಕಿದೆ. ಇಲ್ಲಿನ ಗುರು ಪರಂಪರೆ, ಪರಮಹಂಸರು. ಯೋಗಾನಂದರ ಚಿಂತನೆಗಳಿಂದ ಆಕರ್ಷಿತನಾದೆ. 20ರ ಹರೆಯದಲ್ಲೇ ಅರಬಿಂದೊ ಅವರ ಆಶ್ರಮಕ್ಕೆ ಬಂದೆ’ ಎಂದು ಮೆಲುಕು ಹಾಕಿದರು.

‘ಶಂಕರಾಚಾರ್ಯ, ಅರಬಿಂದೊ,ಪತಂಜಲಿ, ರಮಣ ಮಹರ್ಷಿಗಳ ವಿಚಾರಧಾರೆಗಳು ಕಾರ್ಲ್‌ಮಾರ್ಕ್ಸ್‌ ವಿಚಾರಗಳಿಗಿಂತ ಎಷ್ಟೋ ಉನ್ನತ ಸ್ತರದಲ್ಲಿವೆ. ಭಾರತೀಯರು ಏಕೆ ಪಾಶ್ಚಿಮಾತ್ಯರ ಅಪಕ್ವ ವಿಚಾರಗಳ ಹಿಂದೆ ಹೋಗುತ್ತಿದ್ದಾರೆ ತಿಳಿಯುತ್ತಿಲ್ಲ’ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ಬಹುತ್ವ ಚಿಂತನೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಗುಲ್ಲೆಬ್ಬಿಸಲಾಗುತ್ತಿದೆ.ಈ ಆರೋಪದಲ್ಲಿ ಹುರುಳಿಲ್ಲ. ಆರ್ಯರು ಹೊರಗಿನಿಂದ ಬಂದವರಲ್ಲ ಎಂಬ ವಿಚಾರವನ್ನು ನಾನು ಪ್ರತಿಪಾದಿಸಿದಾಗ ಎಲ್ಲ ಸೇರಿ ನನ್ನ ಮೇಲೆ ಮುಗಿಬಿದ್ದಿದ್ದರು. 1990ರ ದಶಕದಲ್ಲಿ ಭಿನ್ನ ಚಿಂತನೆಗಳನ್ನು ಪ್ರತಿಪಾದಿಸಲು ಅವಕಾಶವೇ ಸಿಗುತ್ತಿರಲಿಲ್ಲ’ ಎಂದರು.

‘ಹಿಂದೂ ಪರಂಪರೆಯ ಮರುವ್ಯಾಖ್ಯಾನ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ವಿಶ್ವ ಪ್ರಜ್ಞೆಯನ್ನು ಪ್ರತಿಪಾದಿಸುವ ಏಕೈಕ ಧರ್ಮವಿದು. ಐಹಿಕ ಸುಖಗಳನ್ನು ಬದಿಗೊತ್ತಿ ಆತ್ಮ ಸಾಕ್ಷಾತ್ಕಾರವನ್ನು ಕಲಿಸುವ ಧರ್ಮವಿದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.