ADVERTISEMENT

ಬ್ಲಾಕ್ ಮಟ್ಟದಲ್ಲಿ ಪ್ರತಿಭಟನೆ: ಸುರ್ಜೇವಾಲ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 20:34 IST
Last Updated 18 ಫೆಬ್ರುವರಿ 2021, 20:34 IST
ರಣದೀಪ್‌ ಸಿಂಗ್ ಸುರ್ಜೇವಾಲ
ರಣದೀಪ್‌ ಸಿಂಗ್ ಸುರ್ಜೇವಾಲ   

ಬೆಂಗಳೂರು: ‘ರಾಜ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಇನ್ನು ಮುಂದೆ ಪ್ರತಿ ಬ್ಲಾಕ್‌ ಮಟ್ಟದಲ್ಲಿಯೂ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಮನೆಮನೆ ಅಭಿಯಾನವನ್ನೂ ಆರಂಭಿಸುತ್ತೇವೆ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಹೇಳಿದರು.

ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ರೂಪಿಸಿಬೇಕಾದ ಕಾರ್ಯತಂತ್ರಗಳ ಬಗ್ಗೆ ಪ್ರಮುಖ ನಾಯಕರ ಜೊತೆ ಎರಡು ದಿನ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ’ ಎಂದೂ ಹೇಳಿದರು.

‘ಮುಖ್ಯವಾಗಿ ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಾನಾ ತೆರಿಗೆಗಳು, ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ರಸ್ತೆ ಸೇರಿದಂತೆ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಅದರ ವಿರುದ್ಧ ಪಕ್ಷ ಹೋರಾಟ ಮಾಡುತ್ತಿದೆ. ಬಿಬಿಎಂಪಿ ಚುನಾವಣೆ ವಿಚಾರ ಕೋರ್ಟ್ನಲ್ಲಿ ಇದೆ. ಯಾವುದೇ ಸಮಯದಲ್ಲೂ ಚುನಾವಣೆ ಘೋಷಣೆ ಆಗಬಹುದು. ಅದಕ್ಕೆ ನಾವು ಸಜ್ಜಾಗುತ್ತಿದ್ದೇವೆ’ ಎಂದರು.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾತನಾಡಿ, ‘ಪಕ್ಷ ಸಂಘಟನೆ ಕುರಿತು ಸುರ್ಜೇವಾಲ ಜೊತೆ ಚರ್ಚಿಸಿದ್ದೇನೆ. ಕಾಂಗ್ರೆಸ್ ಪಕ್ಷ ಜಾತಿ ರಾಜಕೀಯ ಮಾಡಲ್ಲ. ಅಹಿಂದ ಸಮಾವೇಶ ಉಹಾಪೋಹ. ಈ ಬಗ್ಗೆ ಸಿದ್ದರಾಮಯ್ಯ ಅಧಿಕೃತವಾಗಿ ಎಲ್ಲೂ ಹೇಳಿಲ್ಲ. ಸಮಾವೇಶಗಳನ್ನು ಪಕ್ಷದ ಚೌಕಟ್ಟಿನಲ್ಲಿ‌ ಮಾಡುತ್ತಾರೆ ಅಷ್ಟೆ’ ಎಂದರು.

‘ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಚೆನ್ನಾಗಿಯೇ ಇದೆ. ನಮ್ಮಲ್ಲಿ ಗೊಂದಲಗಳಿಲ್ಲ. ಆದರೆ, ಬಿಜೆಪಿ–ಎಐಡಿಎಂಕೆ ನಡುವೆ ಸಾಕಷ್ಟು ಗೊಂದಲಗಳಿವೆ. ಶಶಿಕಲಾ ಅವರು ರಾಜಕೀಯದಲ್ಲಿ ಮತ್ತೆ ಸಕ್ರಿಯರಾಗಿರುವುದು ಎಐಡಿಎಂಕೆಯಲ್ಲೇ ಗೊಂದಲ ಸೃಷ್ಟಿಸಿದೆ’ ಎಂದರು.

ಡಿಕೆಶಿ ಚರ್ಚೆ:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡಾ ಸುರ್ಜೆವಾಲರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.