ADVERTISEMENT

‘ಸಂವಿಧಾನ ಓದು– ನಿಜ ರೂವಾರಿ ಭಂಡಾರಿ’

ವಿಠಲ ಭಂಡಾರಿ ಅವರಿಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 9 ಮೇ 2021, 5:20 IST
Last Updated 9 ಮೇ 2021, 5:20 IST

ಬೆಂಗಳೂರು: ‘ಯುವಜನ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನದ ಜಾಗೃತಿ ಮೂಡಿಸಲು ರಚನೆಯಾದ ‘ಸಂವಿಧಾನ ಓದು’ ಪುಸ್ತಕ ಬರೆಯಲು ವಿಠಲ ಭಂಡಾರಿ ಅವರೇ ಕಾರಣಕರ್ತರು. ಇದರಿಂದ ಹುಟ್ಟಿಕೊಂಡ ‘ಸಂವಿಧಾನ ಓದು ಅಭಿಯಾನ’ ಜನಮನ್ನಣೆ ಗಳಿಸಿತು. ಇದರ ಕೀರ್ತಿಭಂಡಾರಿ ಅವರಿಗೆ ಸಲ್ಲಬೇಕು’ ಎಂದುಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅಭಿಪ್ರಾಯಪಟ್ಟರು.

ಪ್ರಗತಿಪರ ಚಿಂತಕ ಡಾ.ವಿಠಲ ಭಂಡಾರಿ ಅವರಿಗೆ ನುಡಿನಮನ ಸಲ್ಲಿಸಲು ‘ಅವಧಿ’ ವತಿಯಿಂದ ಶನಿವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೆಹಲಿಯಲ್ಲಿ ನಾನು ಉನ್ನತ ಹುದ್ದೆಯಲ್ಲಿದ್ದೆ. ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬೆಂಗಳೂರಿಗೆ ಬಂದಿದ್ದೆ. ಆಗ ಭಂಡಾರಿಯವರು ನನಗೆ ಸಂವಿಧಾನ ಕುರಿತು ಪುಸ್ತಕ ಬರೆಯಲೇಬೇಕು ಎಂದು ಪಟ್ಟು ಹಿಡಿದರು. ಅದರಂತೆ ಪುಸ್ತಕವೂ ಪ್ರಕಟವಾಯಿತು. ಕ್ರಮೇಣ ಇದು ಅಭಿಯಾನದ ರೂಪ ಪಡೆಯಿತು. ‘ಸಂವಿಧಾನ ಓದು’ವಿನ ನಿಜವಾದ ರೂವಾರಿ ಭಂಡಾರಿ’ ಎಂದರು.

ADVERTISEMENT

‘ತಾಳಮದ್ದಲೆಯಲ್ಲಿ ಅವರು ಅಭಿಮನ್ಯು ಪಾತ್ರ ವಹಿಸಿದ್ದರು. ಅವರ ಅಂತ್ಯವೂ ಅಭಿಮನ್ಯುವಿನಂತೆಯೇ ಆಗಿದೆ. ಇತರರಿಗಾಗಿ ಬದುಕಿದವರು ಸತ್ತರೂ ಜೀವಂತವಾಗಿರುತ್ತಾರೆ ಎಂಬ ಮಾತು ಭಂಡಾರಿ ಅವರಿಗೂ ಅನ್ವಯ’ ಎಂದು ಹೇಳಿದರು.

ಚಿಂತಕ ಶ್ರೀಪಾದ್ ಭಟ್, ‘ಕೋಮು ಬೆಂಕಿ ಉರಿಯುತ್ತಿರುವುದನ್ನು ವಿಠಲ ಅವರು ಗಂಭೀರವಾಗಿ ಪರಿಗಣಿಸಿದ್ದರು. ಅದರ ಬಗ್ಗೆ ಸದಾ ಮಾತಿನಲ್ಲಿರುತ್ತಿದ್ದರು. ಸಂಘಟನೆಯನ್ನೇ ಅವರು ಪ್ರಧಾನ ಕಾರ್ಯವನ್ನಾಗಿ ಸ್ವೀಕರಿಸಿದ್ದರು. ಎಲ್ಲರೊಂದಿಗೆ ಇದ್ದ ಅವರು ವಿಭಿನ್ನ ಆಲೋಚನೆಗಳಿಂದ ಕೂಡಿದ್ದರು’ ಎಂದು ನೆನೆದರು.

ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ, ‘ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ವಿಠಲ ಭಂಡಾರಿ ಅವರು ಎಲ್ಲ ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈಗಿನ ವ್ಯವಸ್ಥೆ ಯುವಜನರ ದಿಕ್ಕು ತಪ್ಪಿಸುತ್ತಿದೆ. ಅವರಿಗೆ ಸಂವಿಧಾನ ಜ್ಞಾನದ ಅಗತ್ಯವಿದೆ ಎಂದು ಹೇಳುತ್ತಿದ್ದರು. ಕೊರೊನಾ ಸೋಂಕಿನ ಪರಿಸ್ಥಿತಿಯಲ್ಲೂ ಅವರ ಚಿಂತನೆಗಳಿಗೆ ಜೀವ ತುಂಬಲು ಹೋಗಿದ್ದರು. ಆದರೆ, ಕೊರೊನಾ ಅವರನ್ನು ಬಿಡಲಿಲ್ಲ’ ಎಂದು ಭಾವುಕರಾದರು.

‘ಅವಧಿ’ ಸಂಪಾದಕ ಜಿ.ಎನ್.ಮೋಹನ್, ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.