
ಬೆಂಗಳೂರು: ಅವಧಿ ಪೂರ್ಣಗೊಂಡಿರುವ ವಿವಿಧ 25 ನಿಗಮ ಮಂಡಳಿಗಳ ಅಧ್ಯಕ್ಷರ ಪದಾವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಅಪ್ಪಾಜಿ ನಾಡಗೌಡ, ರಾಜು ಕಾಗೆ, ಎಚ್.ಸಿ. ಬಾಲಕೃಷ್ಣ, ಕೆ.ಎಂ. ಶಿವಲಿಂಗೇಗೌಡ, ಬೇಳೂರು ಗೋಪಾಲಕೃಷ್ಣ, ಟಿ.ಡಿ. ರಾಜೇಗೌಡ, ಶರತ್ ಬಚ್ಚೇಗೌಡ ಸೇರಿ 25 ಶಾಸಕರನ್ನು 2024ರ ಜ. 26ರಂದು ಸಚಿವ ಸಂಪುಟ ಸ್ಥಾನ–ಮಾನಗಳೊಂದಿಗೆ ವಿವಿಧ ನಿಗಮ–ಮಂಡಳಿಗಳ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿತ್ತು.
ನೇಮಕದ ಅವಧಿ ಎರಡು ವರ್ಷವಾಗಿದ್ದು, ಇದೇ 26ಕ್ಕೆ ಕೊನೆ ಆಗಬೇಕಿತ್ತು. 25 ಶಾಸಕರೂ ತಾವು ಈಗ ಇರುವ ನಿಗಮ–ಮಂಡಳಿಗಳ ಅಧ್ಯಕ್ಷ ಹುದ್ದೆಯಲ್ಲೇ ಮುಂದುವರಿಸಲಾಗಿದೆ. ಅವರಿಗೆ ನೀಡಲಾಗುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಂದುವರಿಸಬೇಕು ಎಂದು ಸರ್ಕಾರವು ಆಡಳಿತ ಇಲಾಖೆಗಳಿಗೆ ಸೂಚಿಸಿದೆ.
ಪದಾವಧಿ ಪೂರ್ಣಗೊಂಡ ಕಾರಣ ಶಾಸಕರು ಅಧ್ಯಕ್ಷರ ಗಾದಿ ಕೈತಪ್ಪುವ ಆತಂಕದಲ್ಲಿದ್ದರು. ಹೊಸ ಆದೇಶದಲ್ಲಿ ಮುಂದಿನ ಆದೇಶವರೆಗೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಯಾವಾಗ ಬೇಕಾದರೂ ಅಧ್ಯಕ್ಷರ ಸ್ಥಾನ ಬದಲಾಗಬಹುದಾಗಿದೆ.
ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲಾಗಿತ್ತು. ಕಾಂಗ್ರೆಸ್ ಪಾಳಯದಲ್ಲಿ ಸದ್ಯ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ ರಚನೆ ಕುರಿತ ಚರ್ಚೆ ಜೋರಾಗಿ ನಡೆಯುತ್ತಿದೆ. ನಿಗಮ– ಮಂಡಳಿಗಳ ಅಧ್ಯಕ್ಷರಾಗಿರುವ ಶಾಸಕರ ಪೈಕಿ ಕೆಲವು ಪ್ರಭಾವಿಗಳು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಂಪುಟ ಪುನರ್‌ರಚನೆಯಾದರೆ ಕೆಲವರು ಸಚಿವರಾಗಿ ಬಡ್ತಿ ಪಡೆಯುವ ಸಾಧ್ಯತೆಗಳೂ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.