ADVERTISEMENT

ಮಹಿಳೆಯ ಹಕ್ಕು ಉಲ್ಲಂಘಿಸಿದ ಕೇಂದ್ರ: ಬೋಳುವಾರು ಮೊಹಮ್ಮದ್‌ ಕುಂಞ ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 14:42 IST
Last Updated 13 ಅಕ್ಟೋಬರ್ 2018, 14:42 IST
ಬೋಳುವಾರು ಮೊಹಮ್ಮದ್‌ ಕುಂಞ
ಬೋಳುವಾರು ಮೊಹಮ್ಮದ್‌ ಕುಂಞ   

ಚಿತ್ರದುರ್ಗ: ತ್ರಿವಳಿ ತಲಾಖ್‌ ನಿಷೇಧಿಸುವ ಮೂಲಕ ಮರು ಮದುವೆಯಾಗುವ ಮುಸ್ಲಿಂ ಮಹಿಳೆಯ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಸಾಹಿತಿ ಬೋಳುವಾರು ಮೊಹಮ್ಮದ್‌ ಕುಂಞ ಬೇಸರ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂವಾದದಲ್ಲಿ ಮಾತನಾಡಿದ ಅವರು, ‘ತಲಾಖ್‌ ಪಡೆಯುವ ಮುಸ್ಲಿಂ ಮಹಿಳೆಗೆ ಮರು ವಿವಾಹವಾಗುವ ಅವಕಾಶ ಸುಲಭವಾಗಿ ಸಿಗುತ್ತಿತ್ತು. ವಿಚ್ಛೇದನ ಕೋರಿ ಮತ್ತೆ ನ್ಯಾಯಾಲಯಕ್ಕೆ ಅಲೆಯುವ ಅಗತ್ಯ ಇರಲಿಲ್ಲ. ತ್ರಿವಳಿ ತಲಾಖ್‌ ನಿಷೇಧದಿಂದ ಈ ಅವಕಾಶವೊಂದು ತಪ್ಪಿಹೋಗಿದೆ. ಈ ಕುರಿತು ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

‘ಸರ್ಕಾರ ನಿಷೇಧಿಸಿದ ತ್ರಿವಳಿ ತಲಾಖ್‌ ಇಸ್ಲಾಂನಲ್ಲಿ ಇಲ್ಲ. ಶ್ರೀಕೃಷ್ಣ ನಾಮ ಬರೆದಂತೆ ಒಂದು ಕೋಟಿ ಸಲ ತಲಾಖ್‌ ಹೇಳಿದರೂ ಪತ್ನಿಯನ್ನು ತೊರೆಯಲು ಸಾಧ್ಯವಿಲ್ಲ. ಇಸ್ಲಾಂ ಧರ್ಮದ ಪ್ರಕಾರ ತಲಾಖ್‌ ಹೇಳಲು 3 ತಿಂಗಳು 10 ದಿನ ನಿಗದಿ ಮಾಡಲಾಗಿದೆ. ಪ್ರಮುಖವಲ್ಲದ ವಿಚಾರದ ಬಗ್ಗೆ ಗಮನ ಸೆಳೆದು ಸರ್ಕಾರ ದಿಕ್ಕು ತಪ್ಪಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಪತ್ನಿ ಕೂಡ ಪತಿಯನ್ನು ತೊರೆಯುವ ಅವಕಾಶವನ್ನು ಷರಿಯತ್‌ ನೀಡಿದೆ. ಆದರೆ, ಅದು ಅಷ್ಟು ಸುಲಭವಲ್ಲ. ಎಲ್ಲ ಧರ್ಮ ಗ್ರಂಥಗಳು ಪುರುಷ ಕೇಂದ್ರಿತವಾಗಿ ರಚನೆಯಾಗಿವೆ’ ಎಂದು ಪ್ರೇಕ್ಷಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.