ADVERTISEMENT

ಪ್ರವಾದಿ ಪತ್ನಿಯರನ್ನು ಕನ್ನಡಕ್ಕೆ ತಂದ ಬೊಳುವಾರು

‘ಉಮ್ಮಾ’ ಕಾದಂಬರಿ ಮೂಲಕ ಧಾರ್ಮಿಕ ಚರಿತ್ರೆ–ಪುರಾಣದ ಕಥೆ

ಚ.ಹ.ರಘುನಾಥ
Published 31 ಜುಲೈ 2018, 19:30 IST
Last Updated 31 ಜುಲೈ 2018, 19:30 IST
ಬೊಳುವಾರು
ಬೊಳುವಾರು   

ಬೆಂಗಳೂರು: ‘ಓದಿರಿ’ ಕಾದಂಬರಿಯ ಮೂಲಕ ಪ್ರವಾದಿ ಮುಹಮ್ಮದ್‌ರ ಜೀವನವನ್ನು ಕನ್ನಡಕ್ಕೆ ಪರಿಚಯಿಸಿದ್ದ ಕಾದಂಬರಿಕಾರ ಬೊಳುವಾರು ಮಹಮದ್‌ ಕುಂಞಿ, ಇದೀಗ ಪ್ರವಾದಿ ಮುಹಮ್ಮದರ ಪತ್ನಿಯ ಜೀವನಪ್ರೇರಿತ ಕೃತಿಯನ್ನು ರಚಿಸಿದ್ದಾರೆ. ‘ಉಮ್ಮಾ’ ಹೆಸರಿನ ಈ ಕೃತಿ ಆಗಸ್ಟ್‌ ತಿಂಗಳ ಕೊನೆಯಲ್ಲಿ ಓದುಗರ ಕೈಸೇರಲಿದೆ.

ಕನ್ನಡದ ಸೃಜನಶೀಲ ಸಾಹಿತ್ಯಕ್ಕೆ ಮುಸ್ಲಿಮ್‌ ಬದುಕನ್ನು ಪರಿಚಯಿಸಿದ ಪ್ರಮುಖರಲ್ಲಿ ಒಬ್ಬರಾದ ಬೊಳುವಾರು, ‘ಓದಿರಿ’ ಕಾದಂಬರಿಯಲ್ಲಿ ಪ್ರವಾದಿ ಮುಹಮ್ಮದ್‌ರ ಮೂಲಕ ಮುಸ್ಲಿಂ ಧರ್ಮದ ಪುರುಷಲೋಕವನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದರು. ಈಗ ಪ್ರವಾದಿ ಪತ್ನಿಯ ಕಥನದ ಮೂಲಕ ಸ್ತ್ರೀಲೋಕವನ್ನು ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ಅವರ ಇನ್ನೆರಡು ಕಾದಂಬರಿಗಳಾದ ‘ಜೆಹಾದ್‌’ ಹಾಗೂ ‘ಸ್ವಾತಂತ್ರ್ಯದ ಓಟ’ ಕೃತಿಗಳನ್ನೂ ಮುಸ್ಲಿಂ ಸಮುದಾಯದ ತವಕ ತಲ್ಲಣಗಳು ರೂಪಿಸಿವೆ.

‘ಉಮ್ಮಾ’ ಕಾದಂಬರಿಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಅರೇಬಿಯಾದ ಕೆಲವು ಗೌರವಾನ್ವಿತ ಮಹಿಳೆಯರ ಕಥೆಗಳಿಂದ ಪ್ರೇರಿತವಾದ ಕೃತಿ’ ಎಂದು ಕಾದಂಬರಿಯ ಬಗ್ಗೆ ಹೇಳಿಕೊಂಡರು. ಏಳನೇ ಶತಮಾನದ ಹೆಣ್ಣುಗಳು ಸ್ವಂತವಾಗಿ ಯೋಚನೆಯನ್ನೇ ಮಾಡಲಿಲ್ಲವೆ? ತಮಗನ್ನಿಸಿದ್ದನ್ನು ಗಟ್ಟಿಯಾಗಿ ಹೇಳಿದ್ದೇ ಇಲ್ಲವೆ? ಕನಿಷ್ಠ ತಮ್ಮ ಸ್ವಗತಗಳಲ್ಲಾದರೂ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಲೇಖಕರ ಪ್ರಯತ್ನ ‘ಉಮ್ಮಾ’ ಕಾದಂಬರಿಯಲ್ಲಿದೆ ಎಂದು ಹೇಳಿದರು.

ADVERTISEMENT

‘ಓದಿರಿ’ ಕಾದಂಬರಿ ಬರವಣಿಗೆಯ ಕೊನೆಯ ಹಂತದಲ್ಲಿ ‘ಉಮ್ಮಾ’ ಕಾದಂಬರಿ ಬರೆಯುವ ಹುಕಿ ಹುಟ್ಟಿತು. ಆದರೆ, ಕಾದಂಬರಿ ರಚನೆ ಸುಲಭಸಾಧ್ಯವಾಗಿರಲಿಲ್ಲ. ‘ಮುಸ್ಲಿಮೇತರಿಗೆ ಅರ್ಥವಾಗುವಂತೆ, ಮುಸ್ಲಿಮರಿಗೆ ಸಿಟ್ಟು ಬಾರದಂತೆ ಬರೆಯುವುದರಲ್ಲಿ ದೈಹಿಕವಾಗಿ ಮಾನಸಿಕವಾಗಿ ದಣಿದುಹೋದೆ’ ಎಂದು ಬರವಣಿಗೆ ಒಡ್ಡಿದ ಸವಾಲನ್ನು ಬೊಳುವಾರು ನೆನಪಿಸಿಕೊಳ್ಳುತ್ತಾರೆ. ಈ ಕಾದಂಬರಿ ರಚನೆಗೆ ಅವರಿಗೆ ಸುಮಾರು ಮೂರೂವರೆ ವರ್ಷಗಳ ಸಮಯ ಹಿಡಿದಿದೆ.

ಆಗಸ್ಟ್‌ ಕೊನೆಯ ಭಾಗದಲ್ಲಿ ಕಾದಂಬರಿಯ ಕೆಲ ಭಾಗಗಳನ್ನು ‘ಫೇಸ್‌ಬುಕ್‌’ನಲ್ಲಿ ವಾಚಿಸುವ ಮೂಲಕ ‘ಉಮ್ಮಾ’ ಬಿಡುಗಡೆಯಾಗಲಿದೆ. ‘ಮುತ್ತುಪ್ಪಾಡಿ ಪುಸ್ತಕ’ದ ಮೂಲಕ ಪ್ರಕಟಗೊಳ್ಳುತ್ತಿರುವ ಈ ಕೃತಿ 320 ಪುಟಗಳನ್ನು ಹೊಂದಿದೆ. ಬೆಲೆ: ₹ 250.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.