ಬೆಂಗಳೂರು: ವೇದಿಕೆ ಇರಲಿಲ್ಲ. ಬಣ್ಣದ ಕಾಗದದಲ್ಲಿ ಸುತ್ತಿದ ಪುಸ್ತಕಗಳೂ ಇರಲಿಲ್ಲ. ಅಲ್ಲಿದ್ದುದು ಕಾದಂಬರಿಯ ಮುಖಪುಟ ಹಾಗೂ ‘ನಾನು ಓದಿದೆ. ನೀವು?’ ಎಂದು ಕೇಳುವ ತರುಣಿಯೊಬ್ಬಳ ಫೋಟೊ.
ಇದು ಬೊಳುವಾರು ಮಹಮದ್ ಕುಂಞಿ ಅವರ ‘ಉಮ್ಮಾ’ ಕಾದಂಬರಿ ಸೋಮವಾರ ‘ಫೇಸ್‌ಬುಕ್’ನಲ್ಲಿ ಬಿಡುಗಡೆಯಾದ ರೀತಿ. ಅವರ ಹಿಂದಿನ ಕಾದಂಬರಿ ‘ಓದಿರಿ’ ಕೂಡ ಫೇಸ್‌ಬುಕ್‌ನಲ್ಲಿಯೇ ಬಿಡುಗಡೆಯಾಗಿತ್ತು.
‘ಓದಿರಿ’ ಕಾದಂಬರಿಯಲ್ಲಿ ಪ್ರವಾದಿ ಮುಹಮ್ಮದ್‌ರ ಜೀವನವನ್ನು ಕನ್ನಡಕ್ಕೆ ಪರಿಚಯಿಸಿದ್ದ ಬೊಳುವಾರರು ‘ಉಮ್ಮಾ’ದಲ್ಲಿ ಪ್ರವಾದಿಪತ್ನಿ ಆಯಿಷಾ ಅವರ ಬದುಕಿನ ಕಥೆ ಹೇಳಿದ್ದಾರೆ. ‘ಅರೇಬಿಯಾದ ಕೆಲವು ಗೌರವಾನ್ವಿತ ಮಹಿಳೆಯರ ಕಥೆಗಳಿಂದ ಪ್ರೇರಿತವಾದ ಕೃತಿ’ ಎನ್ನುವುದು ಕಾದಂಬರಿಯ ಬಗ್ಗೆ ಅವರ ಅನಿಸಿಕೆ.
ಸಾಂಪ್ರದಾಯಿಕ ಬಿಡುಗಡೆಗೆ ಬದಲಾಗಿ, ಫೇಸ್‌ಬುಕ್‌ನಲ್ಲಿ ಪುಸ್ತಕ ಬಿಡುಗಡೆ ಮಾಡುವುದರಿಂದ ವಿಶ್ವದ ವಿವಿಧ ಭಾಗಗಳಲ್ಲಿನ ಕನ್ನಡಿಗರಿಗೂ ಮಾಹಿತಿ ತಿಳಿಯುತ್ತದೆ ಎನ್ನುವ ಕಾರಣಕ್ಕಾಗಿ ಬೊಳುವಾರರು ತಮ್ಮ ಕೃತಿಗಳ ಅನಾವರಣಕ್ಕೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪುಸ್ತಕದ ಕೆಲವು ಭಾಗಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಮೂಲಕ ಓದುಗರ ಗಮನವನ್ನು ಸೆಳೆದಿದ್ದಾರೆ.
ಕಳೆದ ವಾರವೇ ‘ಉಮ್ಮಾ’ ಓದುಗರ ಕೈ ಸೇರಬೇಕಿತ್ತು. ಆದರೆ, ಕೊಡಗಿನಲ್ಲಿ ಉಂಟಾದ ಮಳೆ ಅನಾಹುತದ ಕಾರಣದಿಂದಾಗಿ ಒಂದು ವಾರ ತಡವಾಗಿ ಕಾದಂಬರಿ ಬಿಡುಗಡೆಯಾಗಿದೆ.
‘ಮುತ್ತುಪ್ಪಾಡಿ ಪುಸ್ತಕ’ದ ಮೂಲಕ ಪ್ರಕಟಗೊಳ್ಳುತ್ತಿರುವ ಈ ಕೃತಿ 320 ಪುಟಗಳನ್ನು ಹೊಂದಿದೆ. ಬೆಲೆ: ₹ 280.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.