ADVERTISEMENT

ಮೇಟಿ ಪ್ರಕರಣದಲ್ಲಿ ಕಾಂಗ್ರೆಸ್‌ ನಡೆ ಹೇಗಿತ್ತು: ಬೊಮ್ಮಾಯಿ ಪ್ರಶ್ನೆ

ದಾಖಲೆ ಪ್ರದರ್ಶಿಸಿ ಹರಿಹಾಯ್ದ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 16:22 IST
Last Updated 23 ಮಾರ್ಚ್ 2021, 16:22 IST
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಮಧ್ಯೆಯೇ ಸರ್ಕಾರ ಸಮರ್ಥಿಸಿಕೊಂಡ ಗೃಹ ಸಚಿವ ಬಸವರಾಜ ಬೊಮ್ಮಾಯಿ
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ ಮಧ್ಯೆಯೇ ಸರ್ಕಾರ ಸಮರ್ಥಿಸಿಕೊಂಡ ಗೃಹ ಸಚಿವ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮಾಜಿ ಅಬಕಾರಿ ಸಚಿವ ಎಚ್‌.ವೈ.ಮೇಟಿ ವಿರುದ್ಧ 2016 ರಲ್ಲಿ ಅತ್ಯಾಚಾರ ಆರೋಪ ಬಂದಾಗ ಯಾವುದೇ ಠಾಣೆಯಲ್ಲೂ ಎಫ್‌ಐಆರ್‌ ದಾಖಲಿಸದೇ ಕಾಂಗ್ರೆಸ್ ಸರ್ಕಾರ ಸಿಐಡಿ ವಿಚಾರಣೆಗೆ ಆದೇಶ ಮಾಡಿತ್ತು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಅಂದಿನ ದಾಖಲೆ ಪ್ರದರ್ಶಿಸಿದರು.

ಧರಣಿ ನಿರತ ಕಾಂಗ್ರೆಸ್‌ ಸದಸ್ಯರ ಆರೋಪಗಳಿಗೆ ಉತ್ತರ ನೀಡಿದ ಅವರು, ‘ಇವರಿಗೆ ಸತ್ಯ ಬಯಲಿಗೆ ಬರುವುದು ಬೇಕಿಲ್ಲ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂದು ಮೇಟಿಯವರನ್ನು ಅತ್ಯಾಚಾರ ಪ್ರಕರಣದಲ್ಲಿ ರಕ್ಷಿಸಲಾಯಿತು. ಈಗ ನಮಗೆ ಬೋಧನೆ ಮಾಡಲು ಬರುತ್ತಿದ್ದಾರೆ’ ಎಂದು ಬೊಮ್ಮಾಯಿ ಗುಡುಗಿದರು.

ಮೇಟಿ ಪ್ರಕರಣದಲ್ಲೂ ವಿಚಾರಣೆಗೆ ಆದೇಶ ಮಾಡುವಾಗ ಕಾರ್ಯವ್ಯಾಪ್ತಿಯನ್ನು ಸೂಚಿಸಿರಲಿಲ್ಲ. ಅಲ್ಲಿಯೂ ‘ತನಿಖೆ’ ಬದಲಿಗೆ ’ವಿಚಾರಣೆ’ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಆದೇಶದಲ್ಲಿ ನಮೂದಿಸಲಾಗಿತ್ತು. ಆ ಪ್ರಕರಣದಲ್ಲಿ ಸಂತ್ರಸ್ತೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಯಾವುದೇ ಠಾಣೆಯಲ್ಲೂ ಎಫ್‌ಐಆರ್ ದಾಖಲಿಸಲಿಲ್ಲ. ವಿಚಾರಣೆಯ ಆರಂಭದ ಮೊದಲೇ ಕ್ಲಿನ್‌ಚಿಟ್‌ ಕೊಟ್ಟು, ಬಳಿಕ ಬಿ ರಿಪೋರ್ಟ್‌ ನೀಡಿದರು ಎಂದು ಬೊಮ್ಮಾಯಿ ಹರಿಹಾಯ್ದರು.

ADVERTISEMENT

‘ಆಗ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ಯಾವ ರೀತಿ ಆದೇಶ ಹೊರಡಿಸಿದ್ದರೋ ಅದೇ ರೀತಿಯಲ್ಲಿ ಈಗ ಆದೇಶ ಹೊರಡಿಸಲಾಗಿದೆ. ಕಾಂಗ್ರೆಸ್‌ಗೆ ರಾಜಕೀಯ ದುರುದ್ದೇಶ ಬಿಟ್ಟರೆ ಈ ಪ್ರಕರಣದಲ್ಲಿ ಬೇರೆ ಏನೂ ಇಲ್ಲ. ಇವರು ಏನೂ ಮಾಡಿದರೂ ಸರಿ, ನಾವು ಮಾಡಿದರೆ ತಪ್ಪು. ಸತ್ಯ ಮರೆ ಮಾಚಿ, ಭಂಡತನದ ಆರೋಪ ಮಾಡುತ್ತಿದ್ದಾರೆ. ಇವರೇನು ಸತ್ಯ ಹರಿಶ್ಚಂದ್ರರಲ್ಲ’ ಎಂದು ಕಿಡಿಕಾರಿದರು.

‘ಮೇಟಿ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನೇ ತನಿಖಾಧಿಕಾರಿ ಮತ್ತು ವಿಚಾರಣಾಧಿಕಾರಿ ಎಂದು ನೇಮಿಸಲಾಗಿತ್ತು. ನಾವು ಎಸ್‌ಐಟಿ ರಚಿಸಿದ್ದೇವೆ. ಅವರು ವಿಚಾರಣೆಗಿಂತ ಮೊದಲೇ ಮೇಟಿ ನಿರ್ದೋಷಿ ಎಂದು ಘೋಷಿಸಿದ್ದರು’ ಎಂದರು.

‘ಮೇಟಿ ಪ್ರಕರಣದಲ್ಲಿ ಅತ್ಯಾಚಾರದ ದೂರು ನೀಡಿದ್ದ ಮಹಿಳೆಯ ಗತಿ ಏನಾಯಿತು. ಆಗ ಕಾಂಗ್ರೆಸ್‌ ಸರ್ಕಾರ ಆ ಮಹಿಳೆ ವಿರುದ್ಧ ನಿಂತಿತ್ತು. ಆದ್ದರಿಂದ ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಾಗಿಲ್ಲ’ ಎಂದು ಬೊಮ್ಮಾಯಿ ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.