ADVERTISEMENT

‘ಸುಪ್ರೀಂ’ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕ ನ್ಯಾಯಮಂಡಳಿ: ಬೊಮ್ಮಾಯಿ ಸಲಹೆ

ಅಂತರ್‌ರಾಜ್ಯ ಜಲವಿವಾದ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 22:30 IST
Last Updated 19 ಮಾರ್ಚ್ 2025, 22:30 IST
<div class="paragraphs"><p>ಬಸವರಾಜ ಬೊಮ್ಮಾಯಿ</p></div>

ಬಸವರಾಜ ಬೊಮ್ಮಾಯಿ

   

ನವದೆಹಲಿ: ಅಂತರರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಒಂದೇ ನ್ಯಾಯಮಂಡಳಿ ಸ್ಥಾಪಿಸಿ ಆರು ತಿಂಗಳಲ್ಲಿ ವಿವಾದ ಬಗೆಹರಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು. 

ಲೋಕಸಭೆಯಲ್ಲಿ ಬುಧವಾರ ನಡೆದ ಜಲಶಕ್ತಿ ಸಚಿವಾಲಯದ ಬೇಡಿಕೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಅಂತರರಾಜ್ಯ ಜಲ ವಿವಾದ ಕಾಯ್ದೆಯ ಕಾರಣದಿಂದ ಆರ್ಥಿಕವಾಗಿ ಹಾಗೂ ಜೀವನ ಕ್ರಮದಲ್ಲಿಯೂ ನಷ್ಟ ಆಗುತ್ತಿದೆ. ಈ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಯಾವುದಾದರೂ ರಾಜ್ಯ ಜಲ ವ್ಯಾಜ್ಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದರೆ, ನ್ಯಾಯಮಂಡಳಿ ರಚನೆ ಮಾಡಬೇಕಾಗುತ್ತದೆ. ಅಂತರರಾಜ್ಯ ಜಲವ್ಯಾಜ್ಯಗಳಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ’ ಎಂದರು. 

ADVERTISEMENT

‘ಕಳೆದ ಐವತ್ತು ವರ್ಷಗಳಿಂದ ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಉತ್ತರದಲ್ಲಿ ಗುಜರಾತ್, ಪಂಜಾಬ್, ಮಧ್ಯಪ್ರದೇಶದಲ್ಲಿ ನ್ಯಾಯಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಯಾವುದೇ ವಿವಾದಕ್ಕೂ ಪರಿಹಾರ ದೊರೆತಿಲ್ಲ. ಇದರಿಂದ ರಾಜ್ಯಗಳು ಸಮಸ್ಯೆ ಎದುರಿಸುತ್ತಿವೆ. ₹20 ಕೋಟಿಯ ನೀರಾವರಿ ಯೋಜನೆ ₹20 ಸಾವಿರ ಕೋಟಿ ಆಗಿದೆ. ಕೆಲವು ನ್ಯಾಯಮಂಡಳಿಗಳಲ್ಲಿ ಅಧ್ಯಕ್ಷರು 20–30 ವರ್ಷಗಳಿಂದ ಇದ್ದಾರೆ. ಇದರಿಂದ ಆರ್ಥಿಕ ಹೊರೆಯಾಗುತ್ತಿದೆ. ಇದು ನ್ಯಾಯ ವಿಳಂಬವಲ್ಲ. ನ್ಯಾಯದ ತಿರಸ್ಕಾರ’ ಎಂದು ಅವರು ಅಭಿಪ್ರಾಯಪಟ್ಟರು. 

‘2010ರಲ್ಲೇ ಕೃಷ್ಣಾ ನ್ಯಾಯಮಂಡಳಿ ಆದೇಶ ನೀಡಿದೆ. 15 ವರ್ಷ ಕಳೆದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಇದರಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಿಲ್ಲ. ಆಲಮಟ್ಟಿ ಹೆಚ್ಚಳದಿಂದ ತೆಲಂಗಾಣ, ಆಂಧ್ರ ಪ್ರದೇಶಕ್ಕೂ ಅನುಕೂಲವಾಗಲಿದೆ’ ಎಂದರು. 

‘ಮೇಕೆದಾಟು ಯೋಜನೆ ನಮ್ಮ ಹಕ್ಕು. ಈ ಬಗ್ಗೆ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕು. ಮಹಾದಾಯಿ ನ್ಯಾಯಮಂಡಳಿ ಆದೇಶ ನೀಡಿದೆ. ಆದರೆ, ಪರಿಸರ ಸಚಿವಾಲಯ ಅನುಮತಿ ನೀಡುತ್ತಿಲ್ಲ. ಇದರಿಂದ ಕರ್ನಾಟಕ ರಾಜ್ಯಕ್ಕೆ ತೊಂದರೆ ಆಗಿದೆ’ ಎಂದರು. 

‘ಕಾವೇರಿ–ಗೋದಾವರಿ–ಮಹಾನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದು ಉತ್ತಮ ತೀರ್ಮಾನ. ಆದರೆ, ಕರ್ನಾಟಕಕ್ಕೆ ಕಡಿಮೆ ನೀರು ಹಂಚಿಕೆ ಮಾಡಿರುವುದು ಸರಿಯಲ್ಲ. ಬೇಡ್ತಿ– ವರದಾ ನದಿ ಜೋಡಣೆ ಯೋಜನೆಯನ್ನೂ ಶೀಘ್ರ ಕೈಗೆತ್ತಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.