ADVERTISEMENT

ರಾಜಧಾನಿ ಸರಹದ್ದಿನಲ್ಲೇ ಜೀತ ‘ಜೀವಂತ’!

* ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವ ಮಾಲೀಕರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 20:10 IST
Last Updated 21 ಸೆಪ್ಟೆಂಬರ್ 2018, 20:10 IST
ಜೀತದಾಳುಗಳಾಗಿರುವ ಕಾರ್ಮಿಕರು –ಸಾಂದರ್ಭಿಕ ಚಿತ್ರ
ಜೀತದಾಳುಗಳಾಗಿರುವ ಕಾರ್ಮಿಕರು –ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಅಸಂಘಟಿತ ವಲಯಗಳಲ್ಲಿ ಜೀತ ಕಾರ್ಮಿಕ ಪದ್ಧತಿಯ ಹಾವಳಿ ಮಿತಿಮೀರಿದ್ದರೂ ಅಂಥದ್ದೇನೂ ನಡೆಯುತ್ತಿಲ್ಲ ಎಂಬಂತೆ ಬಿಂಬಿಸುತ್ತಾ ಸಮಾಜದ ನಡುವಿನ ದೊಡ್ಡ ಅಪರಾಧವನ್ನು ಮುಚ್ಚಿಟ್ಟುಕೊಂಡು ಬರಲಾಗಿದೆ ಎನ್ನುತ್ತದೆ ಇಂಟರ್‌ನ್ಯಾಷನಲ್‌ ಜಸ್ಟೀಸ್‌ ಮಿಷನ್‌ (ಐಜೆಎಂ) ವರದಿ.

ನಗರದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಇನ್ನೂ ಜೀವಂತವಿರುವ ಜೀತ ಪದ್ಧತಿಯ ಮೇಲೆ ಅದರಲ್ಲಿ ಬೆಳಕು ಚೆಲ್ಲಲಾಗಿದೆ.

ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಶೇ 33ರಷ್ಟು ಕಾರ್ಮಿಕರು ಜೀತದ ಸ್ಥಿತಿಯಲ್ಲಿದ್ದಾರೆ. ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಉಲ್ಲಂಘಿಸಿ ಬಡಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

ರಾಜ್ಯದ ಉಳಿದ ಭಾಗಗಳ ಲೆಕ್ಕವನ್ನೂ ತೆಗೆದುಕೊಂಡರೆ ಲಕ್ಷಾಂತರ ಕಾರ್ಮಿಕರು ಜೀತದಲ್ಲಿದ್ದಾರೆ ಎನ್ನುತ್ತದೆ ಐಜೆಎಂ ಅಧ್ಯಯನ ವರದಿ. ಆದರೆ, ಸರ್ಕಾರದ ದಾಖಲೆಗಳು ಇದಕ್ಕೆ ವ್ಯತಿರಿಕ್ತವಾಗಿವೆ. ರಾಜ್ಯದಲ್ಲಿ 5,000ಕ್ಕಿಂತ ಕಡಿಮೆ ಜೀತ ಕಾರ್ಮಿಕರಿದ್ದಾರೆ ಎಂದು ಅದರ ದಾಖಲೆಗಳು ಹೇಳುತ್ತವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಮಾರುಕಟ್ಟೆ ಪ್ರದೇಶಗಳಲ್ಲಿ ಒಟ್ಟಾರೆ 4,306 ಕಾರ್ಮಿಕರನ್ನು ಅಧ್ಯಯನ ತಂಡ ಸಂದರ್ಶಿಸಿತ್ತು. ವಾರಕ್ಕೊಮ್ಮೆ ಮಾರುಕಟ್ಟೆಗೆ ಹೋಗಿ ಬೇಕಾದ ಪಡಿತರ ತೆಗೆದುಕೊಂಡು ಬರಲಷ್ಟೆ ಉದ್ಯೋಗ ಕೊಟ್ಟವರು (ಅಥವಾ ಮಾಲೀಕರು) ಅವಕಾಶ ಕೊಟ್ಟು, ಮಿಕ್ಕ ವೇಳೆ ತಮ್ಮ ಸುಪರ್ದಿಯಲ್ಲೇ ಇಟ್ಟಿಕೊಂಡ ವಿದ್ಯಮಾನ ಸಹ ಸಂದರ್ಶನದ ವೇಳೆ ಬೆಳಕಿಗೆ ಬಂದಿದೆ.

ಅಧ್ಯಯನ ತಂಡ ಪ್ರತಿಯೊಬ್ಬ ಕಾರ್ಮಿಕನನ್ನು ಸರಾಸರಿ ಹತ್ತು ನಿಮಿಷ ಸಂದರ್ಶನ ಮಾಡಿತ್ತು. 1,439 ಕಾರ್ಮಿಕರು ಜೀತದಲ್ಲಿ ಇರುವುದು ಎದ್ದುಕಂಡಿತು. ಅವರಿಗೆ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಕೂಲಿ ಕೊಡಲಾಗುತ್ತಿದೆ. ಅಲ್ಲದೆ, ಮುಕ್ತವಾಗಿ ಓಡಾಡಲು ಅವಕಾಶ ನೀಡುತ್ತಿಲ್ಲ. ಕೂಲಿಯನ್ನು ಮುಂಗಡವಾಗಿಯೇ ಕೊಟ್ಟು, ಅದನ್ನು ತೀರಿಸುವವರೆಗೆ ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗುತ್ತದೆ ಎಂದೂ ವಿವರಿಸಲಾಗಿದೆ.

‘ಜೀತ ಕಾರ್ಮಿಕ ಪದ್ಧತಿ ಒಂದು ಮುಚ್ಚಿಟ್ಟ ಅಪರಾಧವಾಗಿದೆ. ರಾಜ್ಯದಲ್ಲಿ ಎಷ್ಟು ಜನ ಈ ಕ್ರೂರ ಪದ್ಧತಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ನಿಖರವಾಗಿ ಗೊತ್ತಾಗುವುದಿಲ್ಲ. ಏಕೆಂದರೆ, ಇಂತಹ ವ್ಯವಸ್ಥೆಗೆ ಸಿಕ್ಕು ನಲುಗಿದ ಬಹುತೇಕರು ಮಾತನಾಡಲು, ತಾವು ಅನುಭವಿಸಿದ ನೋವು ಹೇಳಿಕೊಳ್ಳಲು ತಯಾರಿಲ್ಲ’ ಎನ್ನುತ್ತಾರೆ ಐಜೆಎಂನ ಸಹ ನಿರ್ದೇಶಕಿ ಎಂ. ಪ್ರತಿಮಾ.

‘ಬೆಂಗಳೂರಿನಲ್ಲಿ ಜೀತ ವ್ಯವಸ್ಥೆಯಲ್ಲಿ ಸಿಲುಕಿದವರು ಮಾಲೀಕರಿಂದ ಹೊಡೆತ ತಿನ್ನುವುದು, ಜೀವ ಬೆದರಿಕೆ ಎದುರಿಸುವುದು ಮಾಮೂಲಿಯಾಗಿದೆ. ಈ ವಿಷಯವಾಗಿ ಸಮಗ್ರವಾಗಿ ತನಿಖೆ ನಡೆಸುವುದು ಸುಲಭವಲ್ಲ. ಸಂದರ್ಶನ ಆಧರಿತ ನಮ್ಮ ಅಧ್ಯಯನ ವರದಿ ಸಮಸ್ಯೆಯ ಮೇಲ್ಮೈಯನ್ನಷ್ಟೆ ತೋರಿಸಿದೆ’ ಎಂದು ಅವರು ಹೇಳುತ್ತಾರೆ.

ಇಟ್ಟಿಗೆ ಬಟ್ಟಿ, ಕಲ್ಲಿನ ಕ್ವಾರಿ, ನಿರ್ಮಾಣ ವಲಯ ಹಾಗೂ ತೋಟಗಳಲ್ಲಿ ಹೆಚ್ಚಿನ ಪ್ರಮಾಣದ ಜೀತ ಕಾರ್ಮಿಕರಿದ್ದಾರೆ. ಇವರಲ್ಲಿ ಹೆಚ್ಚಿನವರನ್ನು ಒಡಿಶಾ, ತಮಿಳುನಾಡು ಹಾಗೂ ರಾಜ್ಯದ ಇತರ ಭಾಗಗಳಿಂದ ಮಾನವ ಕಳ್ಳ ಸಾಗಣೆ ಮೂಲಕ ಕರೆತರಲಾಗಿದೆ ಎಂದೂ ವರದಿ ಹೇಳುತ್ತದೆ.

ರಾಯನಗರ ಇಟ್ಟಿಗೆ ಗೂಡು ಕಾರ್ಖಾನೆಯಿಂದ 2014ರಲ್ಲಿ ಶಿವಮ್ಮ ಎಂಬ ಮಹಿಳೆಯನ್ನು ರಕ್ಷಿಸಲಾಗಿತ್ತು. ಅವರು ಅಲ್ಲಿ ನಾಲ್ಕು ವರ್ಷ ಜೀತಕ್ಕಿದ್ದರು. ಅವರನ್ನು ರಕ್ಷಣೆ ಮಾಡಿ ಕರೆತಂದ ಮೇಲೆ ಆಟೊ ಕೊಡಿಸಲಾಗಿದೆ. ಶಿವಮ್ಮ ಅವರ ಪತಿ ವೆಂಕಟೇಶ್‌ ಅದನ್ನು ಚಲಾಯಿಸುತ್ತಿದ್ದು, ಇದರಿಂದ ಅವರ ಕುಟುಂಬ ನಿರ್ವಹಣೆಗೆ ಬೇಕಾದ ಆದಾಯ ಸಿಗುತ್ತಿದೆ. ‘ನಮ್ಮಂತಹ ಎಲ್ಲ ಕಾರ್ಮಿಕರಿಗೆ ಪುನರ್‌ವಸತಿ ಕಲ್ಪಿಸುವ ಕೆಲಸ ಆಗಬೇಕಿದೆ’ ಎಂದು ಶಿವಮ್ಮ ಹೇಳುತ್ತಾರೆ.

ಅಂಕಿ–ಅಂಶದಲ್ಲಿ ಅಧ್ಯಯನ

4,306–ಕಾರ್ಮಿಕರ ಸಂದರ್ಶನ

17–ಮಾರುಕಟ್ಟೆಗಳಲ್ಲಿ ನಡೆದ ಅಧ್ಯಯನ

1,439–ಕಾರ್ಮಿಕರು ಜೀತದಲ್ಲಿ ಇರುವುದು ಪತ್ತೆ

34.9 %–ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಜೀತದಲ್ಲಿರುವ ಕಾರ್ಮಿಕರ ಪ್ರಮಾಣ

***

ಎಲ್ಲಿ, ಎಷ್ಟು ಪ್ರಮಾಣದ ಕಾರ್ಮಿಕರ ಜೀತ?

* ಇಟ್ಟಿಗೆ ಗೂಡುಗಳಲ್ಲಿ45%

*ಕಲ್ಲಿನ ಕ್ವಾರಿಗಳಲ್ಲಿ44%

*ಸಣ್ಣ ಕೈಗಾರಿಕೆಗಳಲ್ಲಿ38.2%

* ನಿರ್ಮಾಣ ವಲಯದಲ್ಲಿ​31%

(ಆಯಾ ವಲಯದ ಒಟ್ಟು ಕಾರ್ಮಿಕರ ಶೇಕಡಾವಾರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.