ಗೌರಿ ಲಂಕೇಶ್
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕುರಿತು ಅಮೆರಿಕದ ಪತ್ರಕರ್ತರಾದ ರೊಲೊ ರೋಮಿಂಗ್ ಅವರು ಬರೆದ ‘ಐ ಆ್ಯಮ್ ಆನ್ ದಿ ಹಿಟ್ ಲಿಸ್ಟ್’ ಪುಸ್ತಕವು ಪುಲಿಟ್ಜರ್ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಸ್ಥಾನ ಪಡೆದಿದೆ.
ಈ ಪುಸ್ತಕದಲ್ಲಿನ ವಿಚಾರಗಳು ‘ಜಾಗತಿಕವಾಗಿ ಕಂಡುಬರುವ ವಿಷಯವಸ್ತುಗಳಾದ ಸರ್ವಾಧಿಕಾರ, ಮೂಲಭೂತವಾದ ಮತ್ತು ಮುಕ್ತ ಅಭಿವ್ಯಕ್ತಿಗೆ ಎದುರಾಗಿರುವ ಇತರ ಬೆದರಿಕೆಗಳ ಬಗ್ಗೆ ಕೂಡ ಮಾತನಾಡುತ್ತವೆ’ ಎಂದು ಪುಲಿಟ್ಜರ್ ಪ್ರಶಸ್ತಿ ಮಂಡಳಿಯು ಹೇಳಿದೆ.
ಗೌರಿ ಹತ್ಯೆಯ ತನಿಖೆಯ ಕುರಿತಾದ ಈ ಪುಸ್ತಕವು ಅವರ ಬದುಕಿನ ಬಗೆಗಿನ ವಿವರಗಳನ್ನೂ ಒಳಗೊಂಡಿದೆ. ‘ಜನರಲ್ ನಾನ್–ಫಿಕ್ಷನ್’ ವಿಭಾಗದಲ್ಲಿ ಈ ಪುಸ್ತಕವು ಪ್ರಶಸ್ತಿಗೆ ಪರಿಗಣಿತವಾಗಿತ್ತು. ಆದರೆ ಈ ಕೃತಿಗಿಂತಲೂ, ಬೆಂಜಮಿನ್ ನ್ಯಾಥನ್ಸ್ ಅವರು ಬರೆದ ‘ಟು ದಿ ಸಕ್ಸಸ್ ಆಫ್ ಅವರ್ ಹೋಪ್ಲೆಸ್ ಕಾಸ್’ ಕೃತಿಗೆ ಹೆಚ್ಚಿನ ಮನ್ನಣೆ ದೊರೆತ ಕಾರಣಕ್ಕೆ ಅದಕ್ಕೆ ಪುಲಿಟ್ಜರ್ ಪ್ರಶಸ್ತಿ ಘೋಷಣೆ ಆಗಿದೆ.
ಗೌರಿ ಅವರನ್ನು 2017ರಲ್ಲಿ ಅವರ ಮನೆಯ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ‘ದಿ ಟ್ರಿಬ್ಯೂನ್’ ಪತ್ರಿಕೆಯಲ್ಲಿ ಈ ಪುಸ್ತಕದ ವಿಮರ್ಶೆ ಬರೆದಿರುವ ಪ್ರೊ. ಅವಿಜಿತ್ ಪಾಠಕ್ ಅವರು, ‘ತೀವ್ರವಾದ ಮತ್ತು ರಾಜಕೀಯ ಭ್ರಮನಿರಸನದ ಹಿನ್ನೆಲೆಯಲ್ಲಿ ಭಾರತದ ಪ್ರಜಾತಂತ್ರವು ಅದೆಷ್ಟು ದುರ್ಬಲವಾಗಿದೆ ಎಂಬುದರ ಬಗ್ಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಶೈಲಿಯಲ್ಲಿ ಇದು ವಿವರಣೆ ಒದಗಿಸುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.