ADVERTISEMENT

‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೌರ್ಜನ್ಯ’

‘ಕೃಷ್ಣ ಮಾಸಡಿ ಸಮಗ್ರ ಕತೆಗಳು’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 19:18 IST
Last Updated 10 ಜುಲೈ 2022, 19:18 IST
ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ‘ಕೃಷ್ಣ ಮಾಸಡಿ ಸಮಗ್ರ ಕತೆಗಳು’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಕೃಷ್ಣ ಮಾಸಡಿ, ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಎಲ್. ಹನುಮಂತಯ್ಯ, ಚಿಂತಕ ನಟರಾಜ್ ಹುಳಿಯಾರ್, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಇದ್ದಾರೆ. -ಪ್ರಜಾವಾಣಿ ಚಿತ್ರ
ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ‘ಕೃಷ್ಣ ಮಾಸಡಿ ಸಮಗ್ರ ಕತೆಗಳು’ ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಕೃಷ್ಣ ಮಾಸಡಿ, ವಿಧಾನಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಎಲ್. ಹನುಮಂತಯ್ಯ, ಚಿಂತಕ ನಟರಾಜ್ ಹುಳಿಯಾರ್, ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಇದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಪ್ರಸ್ತುತ ಕಾಲಘಟ್ಟ ದಲ್ಲಿ ಸಾಹಿತಿಗಳು, ಲೇಖಕರು ಮತ್ತು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಸವಾಲಿನ ಕಾಲಘಟ್ಟವಾಗಿದೆ’ ಎಂದು ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಕಳವಳ ವ್ಯಕ್ತಪಡಿಸಿದರು.

ಜಾಣಗೆರೆ ಪತ್ರಿಕೆ ಪ್ರಕಾಶನ ಹಾಗೂ ಸಾಹಿತ್ಯ ಸಂಗಮ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ‘ಕೃಷ್ಣ ಮಾಸಡಿ ಸಮಗ್ರ ಕತೆಗಳು’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.

‘ಬದಲಾದ ಸನ್ನಿವೇಶದಲ್ಲಿಮೂಲ ಟಿಪ್ಪಣಿ ಬರೆದವರಿಗೆ ಜೈಲು ಶಿಕ್ಷೆ ಆಗುತ್ತಿಲ್ಲ. ಬದಲಾಗಿ, ಆ ಟಿಪ್ಪಣಿಯನ್ನು ಫೇಸ್‌ಬುಕ್, ಟ್ವಿಟರ್, ವಾಟ್ಸ್‌ ಆ್ಯಪ್‌ನಲ್ಲಿ ಹಂಚಿಕೊಂಡ ವ್ಯಕ್ತಿಗಳು ಜೈಲು ಪಾಲಾಗುತ್ತಿದ್ದಾರೆ. ಇಂತಹ ಸೂಕ್ಷ್ಮ ಸನ್ನಿವೇಶವನ್ನು ಹೇಗೆ ನಿಭಾಯಿಸುವುದು ಎಂಬ ಗೊಂದಲ ಹಲವರನ್ನು ಕಾಡತೊಡಗಿದೆ’ ಎಂದು ಹೇಳಿದರು.

ADVERTISEMENT

‘ಕಾಲದ ಮೌಲ್ಯಗಳ ಜೊತೆಗಿನ ಸಂಘರ್ಷದಿಂದ ಬರಹಗಾರ ವಿಮುಖನಾದರೆ ಆತ ಮಹತ್ವದ ಬರಹಗಾರನಾಗಿ ಉಳಿಯಲು ಸಾಧ್ಯ ವಿಲ್ಲ. ಪ್ರಮುಖ ಬರಹಗಾರರೆಲ್ಲರೂ ತಮ್ಮ ಕಾಲದ ವಿದ್ಯಮಾನಗಳಿಗೆ ಸ್ಪಂದಿಸಿದ್ದರು.ಭಾಷೀಯ ಸಮು ದಾಯದ ಓದುವ ಅಭಿರುಚಿ ಹೆಚ್ಚಿಸುವ ಕಾರ್ಯ ಮಾಡುವ ವ್ಯಕ್ತಿ ಪೂಜನೀಯ’ ಎಂದರು.

ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ‘ಸುತ್ತಲಿನ ವಿದ್ಯಮಾನಗಳಿಗೆ ಸ್ಪಂದಿಸುವ ಹೊಣೆ ಬರಹಗಾರನಿಗೆ ಇರುತ್ತದೆ. ಸುತ್ತಲು ತಲ್ಲಣ, ಆತಂಕ ಸೃಷ್ಟಿ ಆಗಿರುವಾಗಲೂ ಅದಕ್ಕೆ ಬರಹಗಾರ ಸ್ಪಂದಿಸದಿದ್ದರೆ ಈ ಆತಂಕಕ್ಕೆ ಕಾರಣವಾದ ಶಕ್ತಿಗಳೊಂದಿಗೆ ಆತ ಕೈ ಜೋಡಿಸಿದಂತಾಗುತ್ತದೆ. ತಾನು ಬರೆದ ನಾಟಕದ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಿದಾಗಲೂ ಬರಹಗಾರ ಮೌನವಾಗಿರುವುದು ಸರಿಯಲ್ಲ’ ಎಂದು ಹೇಳಿದರು.

‘ಕೃಷ್ಣ ಮಾಸಡಿ ಅವರ ಬರಹಗಳು ಮಲೆನಾಡಿನ ಗ್ರಾಮ ಜೀವನದ ಬಹುತ್ವದ ಸಂವೇದನೆಯನ್ನು ಸೂಕ್ಷ್ಮ ವಾಗಿ ಚಿತ್ರಿಸುತ್ತದೆ. ಕಾಮಕೇಂದ್ರಿತ ಬರಹಗಳಿದ್ದರೂ, ಮನುಷ್ಯನ ವ್ಯಕ್ತಿತ್ವವನ್ನು ಸಮರ್ಥವಾಗಿ ಬಿಚ್ಚಿಡುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.