ADVERTISEMENT

ದಿಟ್ಟ ನಿಲುವು ತಳೆಯುತ್ತಿದ್ದ ಇಂದಿರಾ ಗಾಂಧಿ: ನಟ ಪ್ರಕಾಶ್‌ ಬೆಳವಾಡಿ ಅಭಿಪ್ರಾಯ

‘ಆ ಹದಿಮೂರು ದಿನಗಳು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 21:34 IST
Last Updated 12 ಡಿಸೆಂಬರ್ 2021, 21:34 IST
ಪ್ರಕಾಶ್‌ ಬೆಳವಾಡಿ (ಎಡದಿಂದ ಮೂರನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಪತ್ರಕರ್ತ ನವೀನ ಸಾಗರ, ರೋಹಿತ್ ಚಕ್ರತೀರ್ಥ, ರ.ವಿ.ಜಹಾಗೀರದಾರ, ನಿವೃತ್ತ ಯೋಧ ರಾಮಚಂದ್ರ ಜಿ.ಹೆಗಡೆ ಹಾಗೂ ಲೇಖಕ ಸುಧೀರ ಸಾಗರ ಇದ್ದರು– ಪ್ರಜಾವಾಣಿ ಚಿತ್ರ
ಪ್ರಕಾಶ್‌ ಬೆಳವಾಡಿ (ಎಡದಿಂದ ಮೂರನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಪತ್ರಕರ್ತ ನವೀನ ಸಾಗರ, ರೋಹಿತ್ ಚಕ್ರತೀರ್ಥ, ರ.ವಿ.ಜಹಾಗೀರದಾರ, ನಿವೃತ್ತ ಯೋಧ ರಾಮಚಂದ್ರ ಜಿ.ಹೆಗಡೆ ಹಾಗೂ ಲೇಖಕ ಸುಧೀರ ಸಾಗರ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ಜರುಗಿದ್ದ ಯುದ್ಧದ ವೇಳೆ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ದಿಟ್ಟ ನಿಲುವುಗಳನ್ನು ತಳೆದಿದ್ದರು. ಅದನ್ನು ನಾವು ಸ್ಮರಿಸಲೇಬೇಕು’ ಎಂದು ನಟ ಪ್ರಕಾಶ್‌ ಬೆಳವಾಡಿ ಹೇಳಿದರು.

ಸುಧೀರ ಸಾಗರ ಅವರ ‘ಆ ಹದಿಮೂರು ದಿನಗಳು (1971 ಭಾರತ–ಪಾಕಿಸ್ತಾನ ಯುದ್ಧದ ರೋಚಕ ಕಥೆಗಳು)’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.

‘ಧರ್ಮವನ್ನು ಭಾಷೆಯೊಂದಿಗೆ ಬೆಸೆಯುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಇತಿಹಾಸವನ್ನು ಮರೆತವರಿಗೆ ಸ್ನೇಹಿತರು ಯಾರು ಶತ್ರುಗಳು ಯಾರು ಎಂಬುದೇ ಗೊತ್ತಿರುವುದಿಲ್ಲ. 1971ರ ಯುದ್ಧವನ್ನು ಭಾರತ ಎದುರಿಸಿದ ರೀತಿ, ಜನರಲ್‌ ಮಾಣೆಕ್‌ ಷಾ ಅವರ ವಿವೇಕದ ಕುರಿತ ಉಲ್ಲೇಖಗಳು ಈ ಪುಸ್ತಕದಲ್ಲಿವೆ’ ಎಂದರು.

ADVERTISEMENT

‘ನಾವು ಎಂತಹದ್ದೇ ಕ್ಷಿಪಣಿಗಳನ್ನು ಇಟ್ಟುಕೊಂಡಿರಬಹುದು. ರಫೇಲ್‌ ಸೇರಿದಂತೆ ಯಾವುದೇ ಯುದ್ಧ ವಿಮಾನಗಳನ್ನು ಖರೀದಿಸಿರಬಹುದು. ದೇಶಭಕ್ತಿಯೇ ನಿಜವಾದ ಶಕ್ತಿ ಎಂಬುದನ್ನು ಮರೆಯಬಾರದು’ ಎಂದು ಅಭಿಪ್ರಾಯ‍ಪಟ್ಟರು.

ಸಾಕ್ಷಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ರ.ವಿ.ಜಹಾಗೀರದಾರ, ‘ಯುದ್ಧ ಶುರುವಾಗುವುದು ರಣರಂಗದಲ್ಲಲ್ಲ. ಅದು ಪ್ರತಿಯೊಬ್ಬರ ಮನಸ್ಸಿನಲ್ಲೇ ನಡೆಯುತ್ತದೆ. ಅಹಂಕಾರ ಹಾಗೂ ಅವಮಾನಗಳ ಕಾರಣಕ್ಕೆ ಯುದ್ಧ ಜರುಗುತ್ತದೆ. ಯುದ್ಧ ಯಾವ ಸಮಸ್ಯೆಗೂ ಪರಿಹಾರವಲ್ಲ. ಅದರಿಂದ ಜೀವಹಾನಿಯ ಜೊತೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ’ ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ, ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ನಾಯಕರು ದೇಶ ವಿಭಜನೆಯನ್ನು ಏಕೆ ಒಪ್ಪಿಕೊಂಡರು ಎಂಬುದು ಇನ್ನೂ ಪ್ರಶ್ನೆಯಾಗಿಯೇ ಕಾಡುತ್ತಿದೆ. ಪಾಕಿಸ್ತಾನವೆಂಬ ದೇಶವನ್ನು ಭಾರತದ ಎರಡು ಹೆಗಲ ಮೇಲೆ ಹೊರೆ ಇಟ್ಟ ಹಾಗೆ ಇಟ್ಟು ಕೈತೊಳೆದುಕೊಂಡು ಬಿಟ್ಟಿದ್ದು ನಮ್ಮ ನಾಯಕರ ದೂರದೃಷ್ಟಿ ಎಂತಹದ್ದು ಎಂಬುದನ್ನು ತೋರಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.