ADVERTISEMENT

ಪುಸ್ತಕ ಅಂಗಡಿ ತೆರೆಯಲು ಅವಕಾಶ ನೀಡಿ -ಲೇಖಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಮೇ 2021, 9:32 IST
Last Updated 19 ಮೇ 2021, 9:32 IST

ಬೆಂಗಳೂರು: ‘ಪುಸ್ತಕ ಓದುವುದರಿಂದ ಆತ್ಮವಿಶ್ವಾಸ ವೃದ್ಧಿಸಲಿದೆ. ಹೀಗಾಗಿ ಪುಸ್ತಕಗಳನ್ನೂ ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಪುಸ್ತಕ ಮಳಿಗೆ ತೆರೆಯಲು ಅವಕಾಶ ನೀಡಲೇಬೇಕು’ ಎಂದು ಪುಸ್ತಕ ಪ್ರಕಾಶಕರು, ಲೇಖಕರು ಹಾಗೂ ಸಾಹಿತಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಹುರೂಪಿ ಬುಕ್‌ ಹಬ್‌ ಬುಧವಾರ ಆಯೋಜಿಸಿದ್ದ ‘ಪುಸ್ತಕವೇಕೆ ಅಗತ್ಯ ವಸ್ತುವಲ್ಲ? ಮದ್ಯದಂಗಡಿಯನ್ನು ಅಗತ್ಯ ಎಂದು ಪರಿಗಣಿಸಿರುವ ಸರ್ಕಾರ, ಪುಸ್ತಕದ ಅಂಗಡಿಗಳ ಬಾಗಿಲು ಮುಚ್ಚಿಸಿದ್ದು ಸರಿಯೇ?’ ವಿಷಯದ ಕುರಿತ ಆನ್‌ಲೈನ್‌ ಸಂವಾದದಲ್ಲಿ ‌‌ಎಲ್ಲರೂ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ನವಕರ್ನಾಟಕ ಬುಕ್‌ ಸ್ಟೋರ್‌ನ ರಮೇಶ್‌ ಉಡುಪ ‘ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಹೀಗಾಗಿ ಅನುಮತಿ ನೀಡಿದೆ. ಪುಸ್ತಕ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪುಸ್ತಕಗಳನ್ನು ಓದುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಲವು ಸಂಶೋಧನೆಗಳಿಂದ ಇದು ಸಾಬೀತಾಗಿದೆ’ ಎಂದರು.

ADVERTISEMENT

ಸಪ್ನಾ ಬುಕ್‌ ಹೌಸ್‌ನ ಆರ್‌.ದೊಡ್ಡೇಗೌಡ ‘ಲಾಕ್‌ಡೌನ್‌ನಿಂದಾಗಿ ಜನ ನಾಲ್ಕು ಗೋಡೆಗಳ ನಡುವೆ ಇರಬೇಕಾಗಿದೆ. ಇಂತಹ ಸಮಯದಲ್ಲಿ ಪುಸ್ತಕ ಖರೀದಿ ಹಾಗೂ ಗ್ರಂಥಾಲಯಗಳಿಂದ ಪುಸ್ತಕಗಳನ್ನು ಮನೆಗೆ ಒಯ್ಯಲು ಅವಕಾಶ ನೀಡಬೇಕಿತ್ತು’ ಎಂದು ಹೇಳಿದರು.

ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ ‘ಪುಸ್ತಕಗಳ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ ಸರ್ಕಾರ ಪುಸ್ತಕಗಳನ್ನು ಅಗತ್ಯ ಸೇವೆ ಎಂದು ಪರಿಗಣಿಸಿದೆ. ಈ ದಿಶೆಯಲ್ಲಿ ನಮ್ಮ ಸರ್ಕಾರವೂ ಚಿಂತಿಸಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಪುಸ್ತಕಗಳಿಗೆ ಬೇಡಿಕೆ ಹೆಚ್ಚಿದೆ. ಜನ ದೂರವಾಣಿ ಕರೆ ಮಾಡಿ ಪುಸ್ತಕಗಳನ್ನು ಕೇಳುತ್ತಿದ್ದಾರೆ. ಅವರ ಬೇಡಿಕೆ ಪೂರೈಸಲು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಆಕೃತಿ ಬುಕ್‌ ಸ್ಟೋರ್‌ನ ಡಿ.ಎನ್‌.ಗುರುಪ್ರಸಾದ್‌ ‘ಕೋವಿಡ್‌ನಿಂದಾಗಿ ಮಕ್ಕಳು ಹೆಚ್ಚು ಒತ್ತಡಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಪೋಷಕರಿಂದ ಪುಸ್ತಕಗಳಿಗೆ ಬೇಡಿಕೆ ಹೆಚ್ಚಿದೆ. ಮಕ್ಕಳ ಹಿತವನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ಮನೋವೈದ್ಯ ಸಿ.ಆರ್‌.ಚಂದ್ರಶೇಖರ್‌ ‘ಮಾನಸಿಕ ಸಮಸ್ಯೆಗಳಿಗೆ ‘ಬುಕ್‌ ಥೆರಪಿ’ ಅಗತ್ಯ. ಲಾಕ್‌ಡೌನ್‌ ಅವಧಿಯಲ್ಲಿ ಮಕ್ಕಳಲ್ಲಿ ಒಂಟಿತನ ಕಾಡುತ್ತಿದೆ. ಅವರು ಮೊಬೈಲ್‌ ಬಳಕೆಯ ಗೀಳು ಹತ್ತಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಪುಸ್ತಕಗಳು ಮನೆಮದ್ದಾಗಬಲ್ಲವು’ ಎಂದು ತಿಳಿಸಿದರು.

‘ಸರ್ಕಾರವು ಓದುವ ಸಂಸ್ಕೃತಿಯನ್ನು ಉಡಾಫೆಯಿಂದ ನೋಡುತ್ತಿದೆ. ಇದು ಖಂಡನಾರ್ಹ. ಇದರ ವಿರುದ್ಧ ಓದುಗರು, ಪ್ರಕಾಶಕರು ಹಾಗೂ ಲೇಖಕರು ಗಟ್ಟಿ ಧ್ವನಿ ಎತ್ತಬೇಕು’ ಎಂದು ಪತ್ರಕರ್ತ ಜೋಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.