ಬೆಂಗಳೂರು: ‘ನನ್ನ ವಿರುದ್ಧ ಕೇಳಿ ಬಂದ ಆರೋಪದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದೇನೆ’ ಎಂದು ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್‌ಖಾನ್ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನನ್ನ ಮೇಲೆ ಎಲ್ಲೂ ನೇರ ಆರೋಪಗಳಿಲ್ಲ. ಇದು ಮಾಧ್ಯಮದ ಸೃಷ್ಟಿ. ನನ್ನ ಮೇಲೆ ಬಿ.ಆರ್. ಪಾಟೀಲ ನೇರ ಆರೋಪ ಮಾಡಿರಲಿಲ್ಲ. ಈ ಕುರಿತು ಈಗಾಗಲೇ ಹೇಳಿದ್ದೇನೆ’ ಎಂದರು.
‘ಪಂಚಾಯಿತಿ ಅಧ್ಯಕ್ಷನ ಪತ್ರಕ್ಕೆ ಮನೆ ಮಂಜೂರಾತಿ ಆಗಿದೆ. ಆದರೆ, ಮಾಧ್ಯಮದಲ್ಲಿ ನನ್ನ ಹೆಸರು ಬಂತು. ಈ ಕಾರಣಕ್ಕೆ ಮುಖ್ಯಮಂತ್ರಿಗೆ ವರದಿ ಕೊಟ್ಟಿದ್ದೇನೆ’ ಎಂದು ಹೇಳಿದರು.
‘ಬಿ.ಆರ್. ಪಾಟೀಲ ಅವರು 2 ವರ್ಷದಲ್ಲಿ ಆರು ಸಾವಿರ ಮನೆ ಕೇಳಿದ್ದರು. ಎಲ್ಲ ಪಂಚಾಯಿತಿಗಳಿಗೂ ಸೇರಿ 950 ಮನೆಗಳನ್ನು ಮಂಜೂರು ಮಾಡಲಾಗಿದೆ. ಬುಧವಾರ ಭೇಟಿ ಮಾಡುವುದಾಗಿ ಪಾಟೀಲರು ನನಗೆ ಹೇಳಿದ್ದರು. ಆದರೆ, ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದಾರೆ’ ಎಂದರು.
‘ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಲಂಚ ನಡೆಯುತ್ತಿದೆ’ ಎಂದು ಬಿ.ಆರ್. ಪಾಟೀಲ ಅವರು ಆರೋಪಿಸಿದ್ದರು.
‘ಕ್ರಮ ತೆಗೆದುಕೊಳ್ಳುವುದು ಸಿಎಂ, ಡಿಸಿಎಂಗೆ ಬಿಟ್ಟದ್ದು’
‘ನನ್ನದೇನೂ ಸಮಾಧಾನ, ಅಸಮಾಧಾನ ಇಲ್ಲ. ಏನೆಲ್ಲ ಹೇಳಬೇಕಾಗಿತ್ತೊ ಅದನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ವಿವರವಾಗಿ ಹೇಳಿದ್ದೇನೆ. ಅವರು ಏನು ಕ್ರಮ ತೆಗೆದುಕೊಳ್ಳುತ್ತಾರೊ. ಅವರಿಗೆ ಬಿಟ್ಟದ್ದು’ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ವಿಚಾರಗಳನ್ನು ಅವರು ಸಮಾಧಾನದಿಂದ ಆಲಿಸಿದ್ದಾರೆ. ಯೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ’ ಎಂದರು.
‘ಸಮಸ್ಯೆ ಸರಿ ಹೋಗಬಹುದೆಂಬ ವಿಶ್ವಾಸ ಇದೆಯೇ?’ ಎಂಬ ಪ್ರಶ್ನೆಗೆ, ‘ಅವರಿಗೇ ಕೇಳಿ’ ಎಂದಷ್ಟೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಪಾಟೀಲರು ಬುಧವಾರ ಸಂಜೆ ಭೇಟಿ ಮಾಡಿದ ಚರ್ಚೆ ನಡೆಸಿದ್ದರು.
‘ಆರೋಪ ಸುಳ್ಳು ಎನ್ನಲ್ಲ’
‘ಹಿರಿಯ ಶಾಸಕರೂ ಆಗಿರುವ ರಾಜ್ಯ ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅವರು ವಸತಿ ಹಂಚಿಕೆ ವಿಚಾರದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಜೊತೆ ಆಡಿರುವ ಮಾತುಗಳನ್ನು ಸುಳ್ಳು ಎನ್ನುವುದಿಲ್ಲ. ಅವರ ಅನುಭವವನ್ನು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
‘ಸಚಿವರು ಕೈಗೆ ಸಿಗುತ್ತಿಲ್ಲ ಎಂಬ ರಾಜು ಕಾಗೆ ಅವರ ಆರೋಪ ಸತ್ಯಕ್ಕೆ ದೂರವಾದದ್ದು. ಒಂದಷ್ಟು ಸಚಿವರು ಎಂದರೆ ಯಾರು ಎಂದು ನಿರ್ದಿಷ್ಟವಾಗಿ ಹೇಳಿದರೆ ತಿದ್ದಿಕೊಳ್ಳಬಹುದು. ಅದು ಯಾರೇ ಆಗಿರಲಿ, ನಾನೇ ಆಗಿರಲಿ. ಮನುಷ್ಯ ಎಂದ ಮೇಲೆ ಲೋಪ ಇರುತ್ತದೆ. ತಿದ್ದಿಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.