ADVERTISEMENT

ಮುಖ್ಯಮಂತ್ರಿ ನಿವಾಸದಲ್ಲಿ ಸಚಿವರಿಗೆ ಉಪಾಹಾರ ಕೂಟ: ಮುಡಾ ವಿಚಾರ ಅನೌಪಚಾರಿಕ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 5:53 IST
Last Updated 1 ಆಗಸ್ಟ್ 2024, 5:53 IST
   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ಬೆಳಿಗ್ಗೆ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಅವರ ಸಂಪುಟದ ಬಹುತೇಕ ಸಚಿವರು ಭಾಗವಹಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅನುಮತಿ ಕೋರಿರುವ ಅರ್ಜಿಯಲ್ಲಿ ಆರೋಪಗಳ ಕುರಿತು ವಿವರಣೆ ನೀಡುವಂತೆ ಮುಖ್ಯಮಂತ್ರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೋಟಿಸ್ ನೀಡಿರುವ ಬಗ್ಗೆ ಈ ವೇಳೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ.

ಉಪಾಹಾರ ಕೂಟದ ಬಳಿಕ ಸಚಿವ ಸಂಪುಟ ಸಭೆ ನಡೆಯಲಿದೆ. ರಾಜ್ಯಪಾಲರು ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅದಕ್ಕೂ ಮೊದಲು ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಈ ಉಪಾಹಾರ ಕೂಟವನ್ನು ಆಯೋಜಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಜೆ ಜಾರ್ಜ್, ದಿನೇಶ್ ಗುಂಡೂರಾವ್, ರಹೀಂ ಖಾನ್, ಶಿವರಾಜ ತಂಗಡಗಿ, ಎನ್‌. ಚಲುವರಾಯಸ್ವಾಮಿ, ಕೆ. ವೆಂಕಟೇಶ್, ಎಚ್.ಸಿ. ಮಹಾದೇವಪ್ಪ, ಡಿ. ಸುಧಾಕರ್, ಈಶ್ವರ್ ಖಂಡ್ರೆ, ಕೆ.ಎಚ್‌. ಮುನಿಯಪ್ಪ, ಮಂಕಾಳ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ, ಮುಖ್ಯಮಂತ್ರಿಯ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್‌. ಪೊನ್ನಣ್ಣ, ಅಡ್ವೊಕೇಟ್‌ ಜನರಲ್ ಶಶಿ ಕಿರಣ್ ಶೆಟ್ಟಿ ಇದ್ದರು.

ಪರಮೇಶ್ವರ – ಪ್ರಿಯಾಂಕ್‌ ಖರ್ಗೆ ಚರ್ಚೆ: ಸಚಿವ ಪ್ರಿಯಾಂಕ್‌ ಖರ್ಗೆ ಅವರು ಉಪಾಹಾರ ಕೂಟಕ್ಕೂ ಮೊದಲು ಗೃಹ ಸಚಿವ ಜಿ. ಪರಮೇಶ್ವರ ನಿವಾಸಕ್ಕೆ ತೆರಳಿ ಕೆಲಹೊತ್ತು ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಿಯಾಂಕ್‌, ‘ಮುಖ್ಯಮಂತ್ರಿಯವರು ತಮ್ಮ ಆಪ್ತ ಸಚಿವರ ಜೊತೆ ಬುಧವಾರ ರಾತ್ರಿ ಸಭೆ ನಡೆಸಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಮುಡಾ ವಿಚಾರದಲ್ಲಿ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಈ ಕಾರಣಕ್ಕೆ ಸಹಜವಾಗಿಯೇ ಎಲ್ಲರ ಜೊತೆ ಚರ್ಚಿಸಿ ಮುಖ್ಯಮಂತ್ರಿ ಸಲಹೆ ಪಡೆದಿರುತ್ತಾರೆ. ಈ ವಿಚಾರದಲ್ಲಿ ಊಹಾಪೋಹ ಸೃಷ್ಟಿಸುವ ಅಗತ್ಯ ಇಲ್ಲ’ ಎಂದರು.

‘ಯಾವುದೇ ಮಾಹಿತಿಯಿಲ್ಲದೆ, ಸ್ಪಷ್ಟನೆ ಕೇಳದೆ‌ ರಾಜ್ಯಪಾಲರು ನೋಟಿಸ್ ನೀಡುವುದು ಸರಿಯಲ್ಲ’ ಎಂದೂ ಹೇಳಿದರು.

‘ಮುಡಾ ವಿಚಾರದಲ್ಗಿ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ರಾಜ್ಯಪಾಲರಿಗೆ ಮುಖ್ಯಮಂತ್ರಿ ನೀಡಿದ್ದಾರೆ. ವೈಯಕ್ತಿಕವಾಗಿ ದಾಖಲೆಗಳನ್ನೂ ಕೊಟ್ಟಿದ್ದಾರೆ. ಆದರೂ ಅವರು ನೋಟಿಸ್ ಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಕಾನೂನು ಪ್ರಕಾರ ಹೋರಾಟ ಮಾಡುತ್ತೇವೆ’ ಎಂದರು.

‘ರಾಜ್ಯಪಾಲರು ಹೇಗೆ ವರ್ತಿಸಬೇಕು, ರಾಜ್ಯ ಸರ್ಕಾರದ ಜೊತೆ ಅವರ ಸಂಬಂಧ ಹೇಗಿರಬೇಕು ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ ಹೇಳಿದೆ. ಅದನ್ನು ಮೀರಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆಂದರೆ, ಆಪ್ಟ್ ಯಾರು ಬರೆದು ಕೊಡುತ್ತಿದ್ದಾರೆ ಎನ್ನುವುದನ್ನೂ ನೋಡಬೇಕು’ ಎಂದರು. 

ಗೃಹ ಸಚಿವ ಜಿ. ಪರಮೇಶ್ವರ ಮಾತನಾಡಿ, ‘ಮುಖ್ಯಮಂತ್ರಿಗೆ ರಾಜ್ಯಪಾಲರು ಶೋಕಸ್ ನೋಟಿಸ್ ಕೊಟ್ಟಿದ್ದಾರೆ. ಅದಕ್ಕೆ ಏನು ಉತ್ತರ ಕೊಡಬೇಕು ಎನ್ನುವುದನ್ನು ಮುಖ್ಯಮಂತ್ರಿ ಮಾಡುತ್ತಾರೆ. ರಾಜ್ಯಪಾಲರಿಗೆ ಏನು ಉತ್ತರ ಕೊಡಬೇಕು ಎಂಬ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಾವು ಚರ್ಚೆ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.