ADVERTISEMENT

ನೋಟಿಸ್ ರದ್ದುಪಡಿಸಲು ₹1 ಲಕ್ಷ ಲಂಚ: ಬಿಬಿಎಂಪಿ ಎಂಜಿನಿಯರ್ ಬಂಧನ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:24 IST
Last Updated 9 ಮೇ 2025, 15:24 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಮಳೆ ನೀರಿನ ಕಾಲುವೆಗೆ ಹಾನಿ ಮಾಡಿದ ಸಂಬಂಧ ನೀಡಲಾಗಿದ್ದ ನೋಟಿಸ್ ರದ್ದುಪಡಿಸಲು ₹1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಬಿಎಂಪಿಯ ಸಹಾಯಕ ಎಂಜಿನಿಯರ್ ನರಸಿಂಹಮೂರ್ತಿ ನಾಯ್ಕ್‌ ಮತ್ತು ಭರತ್ ಎಂಬ ವ್ಯಕ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಗರದ ನಾಗದೇವನಹಳ್ಳಿ ನಿವಾಸಿಗಳಾದ ಸುನಿಲ್‌ ಪಟೇಲ್‌ ಅವರು ಬಿಬಿಎಂಪಿಯ ರಾಜರಾಜೇಶ್ವರಿನಗರದ ವಲಯದ ಹೇರೋಹಳ್ಳಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ನಿವೇಶನದ ಪಕ್ಕದಲ್ಲಿರುವ ಮಳೆ ನೀರಿನ ಕಾಲುವೆಗೆ ಹಾನಿಯಾಗಿದೆ. ಈ ಸಂಬಂಧ ನರಸಿಂಹಮೂರ್ತಿ ನಾಯ್ಕ್‌ ಅವರು ಸುನಿಲ್‌ ಅವರಿಗೆ ನೋಟಿಸ್‌ ನೀಡಿದ್ದರು.

ADVERTISEMENT

‘ಕಾಲುವೆಗೆ ಆಗಿರುವ ಹಾನಿಯನ್ನು ಸರಿಪಡಿಸುತ್ತೇವೆ ಎಂದು ಸುನಿಲ್‌ ಅವರು ನರಸಿಂಹಮೂರ್ತಿ ಅವರನ್ನು ಭೇಟಿ ಮಾಡಿ ತಿಳಿಸಿದ್ದರು. ನೋಟಿಸ್‌ ರದ್ದುಪಡಿಸಲು ₹10 ಲಕ್ಷ ಲಂಚ ನೀಡಬೇಕು ಎಂದು ನರಸಿಂಹಮೂರ್ತಿ ಅವರು ಬೇಡಿಕೆ ಇಟ್ಟಿದ್ದರು. ಮಾತುಕತೆಯ ನಂತರ ₹1 ಲಕ್ಷ ಲಂಚಕ್ಕೆ ಒಪ್ಪಿಕೊಂಡಿದ್ದರು’ ಎಂದು ಲೋಕಾಯುಕ್ತದ ಪ್ರಕಟಣೆ ತಿಳಿಸಿದೆ.

‘ಈ ಬಗ್ಗೆ ಸುನಿಲ್‌ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಎಸ್‌ಪಿ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಅದರಂತೆ ಸುನಿಲ್ ಅವರು ಹೇರೋಹಳ್ಳಿಯ ಬಿಬಿಎಂಪಿ ಕಚೇರಿಯ ಬಳಿ ಹಣ ನೀಡಲು ತೆರಳಿದ್ದರು. ನರಸಿಂಹಮೂರ್ತಿ ಅವರು ಭರತ್ ಎಂಬ ವ್ಯಕ್ತಿಯೊಂದಿಗೆ ಅಲ್ಲಿಗೆ ಬಂದಿದ್ದರು. ಅವರು ಹಣ ಪಡೆದುಕೊಳ್ಳುವ ವೇಳೆ ದಾಳಿ ನಡೆಸಿ, ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದೆ.

‘ಇಬ್ಬರನ್ನೂ ಬಂಧಿಸಿದ್ದು, ಹಣವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರೆಸಲಾಗಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.