ADVERTISEMENT

ಬಿಎಸ್‌ವೈ ವಿರುದ್ಧ ತನಿಖೆ: ತಡೆಯಾಜ್ಞೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 11:00 IST
Last Updated 31 ಅಕ್ಟೋಬರ್ 2022, 11:00 IST
ಯಡಿಯೂರಪ್ಪ
ಯಡಿಯೂರಪ್ಪ   

ನವದೆಹಲಿ:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆಯೊಂದರ ಕಾಮಗಾರಿಯ ಗುತ್ತಿಗೆ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದ ಮೇಲೆ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್‌ನ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಿಸ್ತರಿಸಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠವು ಬಿಜೆಪಿಯ ಹಿರಿಯ ನಾಯಕನ ಮನವಿಯ ಮೇರೆಗೆ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ಯಡಿಯೂರಪ್ಪ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ದವೆ, ‘ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರವು ಪ್ರತಿವಾದಿಯಲ್ಲ’ ಎಂದು ಗಮನ ಸೆಳೆದರು. ಆಗ ನ್ಯಾಯಪೀಠವು, ‘ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರ ಖಾಸಗಿ ದೂರಿನ ಪ್ರಕರಣ ಇದಾಗಿದ್ದರೂ ನಾವು ರಾಜ್ಯ ಸರ್ಕಾರದ ಸಹಾಯ ಪಡೆಯಬಹುದು’ ಎಂದಿತು.

ADVERTISEMENT

ಯಡಿಯೂರಪ್ಪ ವಿರುದ್ಧದ ತನಿಖೆಗೆ ಸೆಪ್ಟೆಂಬರ್‌ 23ರಂದು ನೀಡಿದ್ದ ತಡೆಯಾಜ್ಞೆ ಮುಂದಿನ ಆದೇಶದ ವರೆಗೆ ಮುಂದುವರಿಯಲಿದೆ ಎಂದು ಪೀಠ ಹೇಳಿತು.

ಲಂಚ ಪಡೆದ ಆರೋಪದ ಮೇಲೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಬಿ.ಎಸ್‌. ಯಡಿಯೂರಪ್ಪ, ಅವರ ಮಗ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಹೈಕೋರ್ಟ್‌ ಸೂಚಿಸಿತ್ತು. ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಅವರ ಮಗ ಶಶಿಧರ ಮರಡಿ, ವಿರೂಪಾಕ್ಷಪ್ಪ ಅವರ ಅಳಿಯ ಸಂಜಯ್ ಶ್ರೀ, ಗುತ್ತಿಗೆದಾರ ಚಂದ್ರಕಾಂತ್‌ ರಾಮಲಿಂಗಂ, ಐಎಎಸ್‌ ಅಧಿಕಾರಿ ಜಿ.ಸಿ. ಪ್ರಕಾಶ್‌ ಮತ್ತು 37 ಕ್ರೆಸೆಂಟ್‌ ಹೋಟೆಲ್‌ ಮಾಲೀಕ ಕೆ.ರವಿ ಇತರ ಆರೋಪಿಗಳು. ಈ ಎಲ್ಲರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಯಡಿಯೂರಪ್ಪ ವಿರುದ್ದದ ತನಿಖೆಗೆ ನ್ಯಾಯಪೀಠ ತಡೆ ನೀಡಿದೆ. ಆದರೆ,ಎಸ್‌.ಟಿ.ಸೋಮಶೇಖರ್, ಜಿ.ಸಿ.ಪ್ರಕಾಶ್‌ ಹಾಗೂ ಕೆ.ರವಿ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಈಗಾಗಲೇ ನಿರಾಕರಿಸಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಕೋನದಾಸನಪುರದಲ್ಲಿ ಬಿಡಿಎ ನಿರ್ಮಿಸುತ್ತಿರುವ ಬಹುಮಹಡಿ ವಸತಿ ಸಮುಚ್ಚಯದ ಕಾಮಗಾರಿಯ ಗುತ್ತಿಗೆ ಸಂಬಂಧ ಚಂದ್ರಕಾಂತ್‌ ರಾಮಲಿಂಗಂ ಅವರಿಂದ ಇತರ ಆರೋಪಿಗಳು ಒಟ್ಟು ₹ 29.5 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.