ADVERTISEMENT

ಬಿಜೆಪಿಗೆ ಬಿಎಸ್‌ವೈ ಒಲ್ಲದ ಶಿಶು: ಸಿದ್ದರಾಮಯ್ಯ ಟೀಕೆ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:45 IST
Last Updated 31 ಆಗಸ್ಟ್ 2019, 19:45 IST

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ಬಿಜೆಪಿಗೆ ಒಲ್ಲದ ಶಿಶುವಿನಂತಾಗಿದ್ದಾರೆ. ಅವರಿಗೆ ಕಡಿವಾಣ ಹಾಕುವುದಕ್ಕಾಗಿಯೇ ಬಿಜೆಪಿ ಹೈಕಮಾಂಡ್‌ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಮೊದಲು ಮೂರು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅನೈತಿಕ ಮಾರ್ಗದ ಮೂಲಕ ಅಧಿಕಾರ ಹಿಡಿದಿದ್ದಾರೆ. ಈಗ ಅವರಿಗೆ ಕಡಿವಾಣ ಹಾಕಲು ಲಕ್ಷ್ಮಣ ಸವದಿಯಂತವರನ್ನೂ ಉಪ ಮುಖ್ಯಮಂತ್ರಿ ಮಾಡಲಾಗಿದೆ’ ಎಂದರು.

ಸವದಿ ಸಚಿವರಾಗಿದ್ದ ಅವಧಿಯಲ್ಲಿ ವಿಧಾನಸಭೆಯಲ್ಲಿ ಏನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡಿರುವ ಬಿಜೆಪಿ ನಾಯಕರಿಗೆ ಮಾನ, ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

ADVERTISEMENT

ರಾಜಕೀಯ ದ್ವೇಷ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ, ಕೇಂದ್ರ ಚುನಾವಣಾ ಆಯೋಗ, ರಿಸರ್ವ್‌ ಬ್ಯಾಂಕ್‌ ಎಲ್ಲವನ್ನೂ ಕೈಗೊಂಬೆ ಮಾಡಿಕೊಂಡಿದೆ. ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳ ವಿರುದ್ಧ ದ್ವೇಷ ಸಾಧಿಸುತ್ತಿದೆ’ ಎಂದು ಟೀಕಿಸಿದರು.

‘ಆಪರೇಷನ್‌ ಕಮಲದ ಹೆಸರಿನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ರಾಜೀನಾಮೆ ಕೊಡಿಸುವಾಗ ಅವರಿಗೆ ₹ 25 ಕೋಟಿಯಿಂದ ₹ 30 ಕೋಟಿವರೆಗೂ ಹಣ ನೀಡಲಾಗಿದೆ. ಕೆಲವು ಶಾಸಕರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಏಕೆ ತನಿಖೆ ನಡೆಸುವುದಿಲ್ಲ’ ಎಂದು ಕೇಳಿದರು.

ದೇಶಕ್ಕೆ ಗಂಡಾಂತರ: ಮೋದಿಯವರ ಆಡಳಿತದ ಅವಧಿಯಲ್ಲಿನ ವಿಫಲ ಆರ್ಥಿಕ ನೀತಿಗಳಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಜಿಡಿಪಿ ಬೆಳವಣಿಗೆ ದರ ಆರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ನೋಟುಗಳ ನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ ಅವೈಜ್ಞಾನಿಕ ಅನುಷ್ಠಾನದಿಂದ ದೇಶವನ್ನೇ ಬಿಕ್ಕಟ್ಟಿಗೆ ತಳ್ಳಿದ್ದಾರೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.