ADVERTISEMENT

ಪಕ್ಷದ ಸಂಘಟನೆಗೆ ಕೆಲಸ ಮಾಡುತ್ತೇನೆ; ಬೇರೆ ಸ್ಥಾನಮಾನ ಬೇಡ: ಬಿ.ಎಸ್‌.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 8:36 IST
Last Updated 26 ಜುಲೈ 2021, 8:36 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು:ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ರಾಜ್ಯದ ಜನರು ಅವಕಾಶ ನೀಡಿದ್ದಾರೆ. ಅವರಿಗೆ ಋಣಿಯಾಗಿರುತ್ತೇನೆ ಎಂದು ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕರಾಜಭವನದ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ದೇಶದ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.75 ವರ್ಷ ದಾಟಿದ ನನ್ನ ಮೇಲೆ ಅಭಿಮಾನ ಇಟ್ಟು ನನಗೆ ಎರಡು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದ್ದಾರೆ. ಅವರಿಗೆ ಮತ್ತೊಮ್ಮೆ ಕೃತಜ್ಞತೆಗಳು ಎಂದು ಹೇಳಿದರು.

ರಾಜೀನಾಮೆ ನಿರ್ಧಾರದ ಬಗ್ಗೆ ಮಾತನಾಡಿದ ಬಿಎಸ್‌ವೈ,ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಎರಡು ವರ್ಷ ತುಂಬಿದ ದಿನ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಅದೇ ರೀತಿ ಕೊಟ್ಟಿದ್ದೇನೆ. ರಾಜ್ಯಪಾಲರು ರಾಜೀನಾಮೆಯನ್ನುಒಪ್ಪಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ರಾಜ್ಯದ ಜನರು ಅವಕಾಶ ನೀಡಿದ್ದಾರೆ. ಅವರಿಗೆಋಣಿಯಾಗಿರುತ್ತೇನೆ ಎಂದರು.

ಮುಂದುವರಿದು,ನನ್ನ ಮೇಲೆ ದೆಹಲಿಯಿಂದ ಯಾವುದೇ ಒತ್ತಡ ಇಲ್ಲ. ಬೇರೆಯವರಿಗೆ ಅವಕಾಶ ಸಿಗಬೇಕೆಂದು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ. ವಿಶೇಷವಾಗಿ ಶಿಕಾರಿಪುರದ ಜನರಿಗೆ ನನ್ನ ಕೃತಜ್ಞತೆಗಳು. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಆಶಿಸಿದರು.

ಮುಂದಿನ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ.ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತೇನೆಯೇ ಹೊರತು. ಬೇರೆ ಯಾವುದೇ ಸ್ಥಾನಮಾನವನ್ನು ಒಪ್ಪಿಕೊಳ್ಳುವುದಿಲ್ಲ. ಮುಂದೆ ಬರುವ ಮುಖ್ಯಮಂತ್ರಿಗೂ ನೆರವು ನೀಡುತ್ತೇನೆ.ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಮುಂದಿನ ಮುಖ್ಯಮಂತ್ರಿ ಆಯ್ಕೆಮಾಡುವ ವಿಚಾರಹೈಕಮಾಂಡ್‌ಗೆ ಬಿಟ್ಟದ್ದು. ಅವರು ಯಾರನ್ನು ಮುಖ್ಯಮಂತ್ರಿ ಮಾಡುತ್ತಾರೊ ಅವರಿಗೆ ಎಲ್ಲ ರೀತಿಯ ನೆರವು ನೀಡುತ್ತೇನೆ. ವಲಸಿಗ ಸಚಿವರೂ ನಮ್ಮ ಜೊತೆ ಇದ್ದಾರೆ. ಈ ಸರ್ಕಾರ ತರಲು ಜೊತೆಗೆ ನಿಂತ ಎಲ್ಲರೂ ಮುಂದೆಯೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.