ADVERTISEMENT

ಬಿಜೆಪಿ: ‘ದೂರು ಸಂಸ್ಕೃತಿ’ಗೆ ನಾಂದಿ ಹಾಡಿದ್ದು ಯಾರು?

ತಂಡ ಕರೆಸಿದ್ದು ಬಿ.ಎಲ್‌.ಸಂತೋಷ್‌ ಎಂಬುದು ಬಿಎಸ್‌ವೈ ಬಣದ ವಾದ

ಎಸ್.ರವಿಪ್ರಕಾಶ್
Published 28 ನವೆಂಬರ್ 2020, 19:45 IST
Last Updated 28 ನವೆಂಬರ್ 2020, 19:45 IST
ಬಿ.ಎಸ್‌. ಯಡಿಯೂರಪ್ಪ, ಬಿ.ಎಲ್. ಸಂತೋಷ್
ಬಿ.ಎಸ್‌. ಯಡಿಯೂರಪ್ಪ, ಬಿ.ಎಲ್. ಸಂತೋಷ್   

ಬೆಂಗಳೂರು: ಸಚಿವರು ಮತ್ತು ಶಾಸಕರ ದಂಡು ಶುಕ್ರವಾರ ದೆಹಲಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೆಳಗಿಳಿಸಲು ವರಿಷ್ಠರಿಗೆ ದೂರು ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ತಮ್ಮ ಮುಖ್ಯಮಂತ್ರಿ ವಿರುದ್ಧ ದೆಹಲಿಯಲ್ಲಿ ಹೈಕಮಾಂಡ್‌ಗೆ ದೂರು ಸಲ್ಲಿಸಿ ಕೆಳಗಿಳಿಸಲು ಯತ್ನಿಸುವುದು ಆ ಪಕ್ಷದಲ್ಲಿ ‘ಸಂಸ್ಕೃತಿ’ಯಾಗಿ ಬೆಳೆದುಬಂದಿದೆ.

ಬಿಜೆಪಿಯಲ್ಲಿ ಇಂತಹ ಪ್ರವೃತ್ತಿಗೆ ಸೊಪ್ಪು ಹಾಕುವುದಿಲ್ಲ. ಮುಖ್ಯಮಂತ್ರಿಯನ್ನು ಇಳಿಸುವ ಸಲುವಾಗಿ ಇದೇ ಮೊದಲ ಬಾರಿಗೆ ರಾಜ್ಯದಿಂದ ಸಚಿವರು ಮತ್ತು ಶಾಸಕರು ದೆಹಲಿಗೆ ದೂರು ಒಯ್ದಿದ್ದಾರೆ. ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ, ಅಹವಾಲು ಸಲ್ಲಿಸಿದ್ದಾರೆ.

ADVERTISEMENT

ಸಚಿವರು ಮತ್ತು ಶಾಸಕರನ್ನು ಅಲ್ಲಿ ಸೇರಿಸಲು ವೇದಿಕೆ ಆಗಿದ್ದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಕಚೇರಿ ಪ್ರವೇಶದ ನಿಮಿತ್ತ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮ. ಆ ನೆಪದಲ್ಲಿ ದೆಹಲಿಗೆ ಸಚಿವರು ಮತ್ತು ಶಾಸಕರನ್ನು ಕರೆಸಿಕೊಂಡು ವರಿಷ್ಠರಿಗೆ ದೂರು ಕೊಡಿಸುವ ಕಾರ್ಯತಂತ್ರದ ಹಿಂದಿನ ಸೂತ್ರಧಾರಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಎಂಬುದು ಯಡಿಯೂರಪ್ಪ ಆಪ್ತ ವಲಯದ ವಾದ.

ಬಿಜೆಪಿಯಲ್ಲಿ ರಾಷ್ಟ್ರೀಯ ಮಟ್ಟದ ಪದಾಧಿಕಾರಿಯ ಅಧಿಕಾರ ಸ್ವೀಕಾರವಾಗಲಿ ಅಥವಾ ಕಚೇರಿ ಪ್ರವೇಶಕ್ಕೆ ಆಯಾ ವ್ಯಕ್ತಿ ಪ್ರತಿನಿಧಿಸುವ ರಾಜ್ಯದಿಂದ ದೊಡ್ಡ ಮಟ್ಟದ ನಿಯೋಗ ಹೋಗಿ ಅಭಿನಂದಿಸುವ ಪರಿಪಾಟವಿಲ್ಲ. ಸಿ.ಟಿ.ರವಿ ಅವರ ಜತೆ ಇನ್ನೂ ಕೆಲವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ. ಆದರೆ, ಅವರ ಅಧಿಕಾರ ಸ್ವೀಕಾರ ಅಥವಾ ಕಚೇರಿ ಪ್ರವೇಶ ಸುದ್ದಿಯೇ ಆಗಲಿಲ್ಲ.

ಇತ್ತೀಚಿನ ಉಪಚುನಾವಣೆ ಬಳಿಕ ಯಡಿಯೂರಪ್ಪ ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಇನ್ನಷ್ಟು ಆಕ್ರಮಣಕಾರಿ ನಡೆ ತೋರಿರುವ ಕಾರಣ ಅದಕ್ಕೆ ಕಡಿವಾಣ ಹಾಕಲು ಈ ತಂತ್ರ ಅನುಸರಿಸಲಾಗಿದೆ. ಈಗಲೇ ತಡೆಯದಿದ್ದರೆ ನಿಭಾಯಿಸುವುದು ಕಷ್ಟವಾಗಬಹುದು ಎಂಬ ಕಾರಣಕ್ಕೆ ವಿವಿಧ ಸಚಿವರು ಮತ್ತು ಶಾಸಕರನ್ನು ಕರೆಸಿಕೊಳ್ಳಲಾಗಿದೆ. ನೇರವಾಗಿ ಜೆ.ಪಿ.ನಡ್ಡಾ ಅಥವಾ ಅಮಿತ್ ಶಾ ಅವರ ಬಳಿ ಹೋದರೆ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಅರುಣ್‌ ಸಿಂಗ್‌ ಜತೆ ಚರ್ಚಿಸುವ ವ್ಯವಸ್ಥೆ ಮಾಡಲಾಗಿದೆ. ಔಪಚಾರಿಕವಾಗಿ ಬಿ.ಎಲ್.ಸಂತೋಷ್‌ ಅವರ ಭೇಟಿಯೂ ಆಗಿದೆ.

ಬಿಜೆಪಿಯಲ್ಲಿ ವರಿಷ್ಠರ ಭೇಟಿ ಸುಲಭದ ಮಾತಲ್ಲ. ರಾಜ್ಯದಿಂದ ಯಡಿಯೂರಪ್ಪ ಆಗಲಿ, ಪಕ್ಷದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಆಗಲಿ ಭೇಟಿಗೆ ಸಮಯ ಕೊಟ್ಟಿದ್ದರೆ ಮಾತ್ರ ನಡ್ಡಾ ಅಥವಾ ಶಾ ಅವರ ಭೇಟಿ ಸಾಧ್ಯ. ಕೆಲವು ಸಂದರ್ಭಗಳಲ್ಲಿ ನಡ್ಡಾ ಭೇಟಿಗೆ ನಳಿನ್‌ ಅವರು ಸಮಯ ನಿಗದಿ ಆಗಿದ್ದರೂ ಗಂಟೆಗಟ್ಟಲೆ ಕಾದಿದ್ದೂ ಇದೆ. ನೇರವಾಗಿ ನಡ್ಡಾ ಮತ್ತು ಶಾ ಅವರನ್ನು ಭೇಟಿ ಮಾಡುವುದು ಕಷ್ಟ ಇರುವುದರಿಂದ ಅರುಣ್‌ಸಿಂಗ್‌ ಅವರ ಕಿವಿಗೆ ದೂರನ್ನು ಹಾಕಿದರೆ, ಅದು ಮೇಲಿನವರಿಗೂ ತಲುಪುತ್ತದೆ ಎಂಬುದು ದಂಡು ಕರೆಸಿದವರ ಸರಳ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.