
ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣದಲ್ಲಿ ತಮ್ಮ ವಿರುದ್ಧ ಸಂಜ್ಞೇಯ ಅಪರಾಧ ಪರಿಗಣಿಸಿರುವುದನ್ನು ರದ್ದುಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಯಡಿಯೂರಪ್ಪ ಪರ ವಾದ ಪೂರ್ಣಗೊಳಿಸಿದ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ‘ಸಂತ್ರಸ್ತೆಯ ಹೇಳಿಕೆಯನ್ನಷ್ಟೇ ಪರಿಗಣಿಸಿ, ಸಂಜ್ಞೇಯ ಅಪರಾಧ ಪರಿಗಣಿಸಲಾಗಿದೆ ಎಂದು ವಿಚಾರಣಾ ನ್ಯಾಯಾಲಯ ಹೇಳಬೇಕಿತ್ತು. ಆದರೆ ಆ ರೀತಿ ಮಾಡಿಲ್ಲ. ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಸಮನ್ವಯ ನ್ಯಾಯಪೀಠ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿತ್ತು. ಅದನ್ನೂ ಮಾಡಲಾಗಿಲ್ಲ. ಸಂಜ್ಞೇಯ ಅಪರಾಧ ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ವಿವೇಚನೆ ಬಳಕೆ ಮಾಡಿಲ್ಲ’ ಎಂದು ಆಕ್ಷೇಪಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಸಂತ್ರಸ್ತೆಯ ತಾಯಿ ಮತ್ತು ಯಡಿಯೂರಪ್ಪ ನಡುವಿನ ಆಡಿಯೊ ರೆಕಾರ್ಡಿಂಗ್ ನಾಶಪಡಿಸಲಾಗಿದೆ. ಅದು ಇಲ್ಲ ಎಂದಾದರೆ ಯಡಿಯೂರಪ್ಪ ಅವರು ₹2 ಲಕ್ಷ ಮೊತ್ತವನ್ನು ಅಂದು ಸಂತ್ರಸ್ತೆಗೆ ನೀಡಿದ್ದಾದರೂ ಯಾಕೆ? ಸಂತ್ರಸ್ತೆಯ ತಾಯಿಯ ಮೊಬೈಲ್ ಕಸಿದ ಸಹ ಆರೋಪಿ ಅರುಣ್ ಎಂಬವರು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಆಡಿಯೊ ರೆಕಾರ್ಡಿಂಗ್ ಡಿಲೀಟ್ ಮಾಡಿಸಲಾಗಿದೆ. ಆದರೆ, ಸಂತ್ರಸ್ತೆ ಮೊಬೈಲ್‌ನಲ್ಲಿ ಅಸಲಿ ಆಡಿಯೊ ಇದೆ’ ಎಂದರು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಕಾಯ್ದಿರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.