ADVERTISEMENT

ಶೀಘ್ರ ವಿರೋಧ ಪಕ್ಷ ನಾಯಕನ ನೇಮಕ: ಬಿ.ಎಸ್.ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 10:05 IST
Last Updated 5 ಜುಲೈ 2023, 10:05 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ದಾವಣಗೆರೆ: 'ಬುಧವಾರ ಸಂಜೆ ಅಥವಾ ಗುರುವಾರದೊಳಗೆ ವಿರೋಧ ಪಕ್ಷ ನಾಯಕನನ್ನು ನೇಮಿಸಲಾಗುತ್ತದೆ' ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವರ 71ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬುಧವಾರ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

'ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಕಾಂಗ್ರೆಸ್ ಪಕ್ಷದವರು ಆರೋಪಿಸಿದ್ದಾರೆ. ಈ ವಿಚಾರವನ್ನು ನ್ಯಾಯಾಂಗ ತನಿಖೆಗೂ ಒಪ್ಪಿಸುವುದಾಗಿ ಹೇಳುತ್ತಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ' ಎಂದರು.

ADVERTISEMENT

'ಸರ್ಕಾರವು ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಬೇಕು. ಅವು ಅನುಷ್ಠಾನಗೊಳ್ಳುವವರೆಗೂ ಸದನದ ಹೊರಗೆ ಹಾಗೂ ಸದನದ ಒಳಗೆ ನಿರಂತರ ಹೋರಾಟ ನಡೆಸುತ್ತೇವೆ' ಎಂದರು.

ಬರಪೀಡಿತ ರಾಜ್ಯವೆಂದು ಘೋಷಿಸಿ: 'ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋಷಣೆ ಮಾಡಿ' ಎಂದು ಯಡಿಯೂರಪ್ಪ ಒತ್ತಾಯಿಸಿದರು.

'ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲ. ಯಾವ ಭಾಗದಲ್ಲೂ ಶೇಕಡ 10ರಷ್ಟೂ ಬಿತ್ತನೆ ಕಾರ್ಯ ನಡೆದಿಲ್ಲ. ಜಲಾಶಯಗಳ ಒಡಲೂ ಬರಿದಾಗಿವೆ. ಒಟ್ಟರೆಯಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ಸರ್ಕಾರವು ಬರ ಪೀಡಿತ ರಾಜ್ಯವೆಂದು ಘೋಷಿಸಲು ಮೀನಮೇಷ ಎಣಿಸುತ್ತಿದೆ' ಎಂದು ದೂರಿದರು.

'ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರಕ್ಕೆ ಇದರ ಪರಿವೇ ಇಲ್ಲ.

ಕಣ್ಣುಮುಚ್ಚಿ ಕುಳಿತಿರುವ ಈ ಸರ್ಕಾರ ಇನ್ನಾದರೂ ಕಣ್ಣು ತೆರೆಯಲಿ' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.