ADVERTISEMENT

ಪ್ರವಾಹ: ಶೀಘ್ರವೇ ಕೇಂದ್ರದ ಪರಿಹಾರ-ಯಡಿಯೂರಪ್ಪ

ಯಾವ ರಾಜ್ಯಕ್ಕೂ ನೆರವು ದೊರೆತಿಲ್ಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:49 IST
Last Updated 22 ಸೆಪ್ಟೆಂಬರ್ 2019, 19:49 IST
   

ನವದೆಹಲಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಹದಿಂದ ತೀವ್ರ ಸಮಸ್ಯೆ ತಲೆದೋರಿದ್ದು, ಕೇಂದ್ರವು ಎರಡು–ಮೂರು ದಿನಗಳಲ್ಲಿ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭಾನುವಾರ ಬೆಳಿಗ್ಗೆ ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಮಿತ್‌ ಶಾ ಅವರೊಂದಿಗೆ ಪ್ರವಾಹದ ನಂತರದ ಸ್ಥಿತಿಗತಿಯ ಕುರಿತು ಹಾಗೂ ಪರಿಹಾರ ಕಾರ್ಯಗಳ ಅಗತ್ಯ ಕುರಿತು ಚರ್ಚಿಸಲಾಗಿದೆ. ತಕ್ಷಣವೇ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದ್ದು, ಅವರೂ
ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ADVERTISEMENT

ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ರಾಜ್ಯ ಸರ್ಕಾರವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪುನರ್ವಸತಿ, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಹಾಗೂ ರೈತರಿಗೆ ಬೆಳೆ ಹಾನಿಗೆ ಪರಿ
ಹಾರ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷಿಯಲ್ಲಿದೆ ಎಂದು ತಿಳಿಸಿದರು.

ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸಿಲ್ಲ. ಚುನಾವಣೆ ಘೋಷಣೆಯಾಗಿರುವ ಮಹಾರಾಷ್ಟ್ರಕ್ಕೂ ಬಿಡಿಗಾಸು ಪರಿಹಾರ ನೀಡಿಲ್ಲ. ಬಹುಶಃ ಎಲ್ಲ ರಾಜ್ಯಗಳಿಗೂ ಒಟ್ಟಿಗೆ ಪರಿಹಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಪರಿಹಾರದ ವಿಷಯದಲ್ಲಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದರು.

ಅನರ್ಹರ ಕುರಿತೂ ಇದೇ ವೇಳೆ ಯಡಿಯೂರಪ್ಪ ಚರ್ಚಿಸಿದರು ಎಂದು ತಿಳಿದುಬಂದಿದೆ. ಉಪ ಮುಖ್ಯಮಂತ್ರಿ
ಗಳಾದ ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಜರಿದ್ದರು.

ನ್ಯಾಯ ಸಿಗುವ ವಿಶ್ವಾಸ

ರಾಜೀನಾಮೆ ಸ್ವೀಕರಿಸದೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶದ ಸಿಂಧುತ್ವ ಪ್ರಶ್ನಿಸಿ 17 ಜನ ಅನರ್ಹರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆ
ಯಲಿದ್ದು, ಅನರ್ಹರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು. ಉಪ ಚುನಾವಣೆ ಘೋಷಣೆಯಿಂದ ಆಘಾತವಾಗಿದೆ. ಈ ವಿಷಯ ತಿಳಿದು ಅಮಿತ್‌ ಶಾ ಅವರೂ ಆಘಾತಕ್ಕೊಳಗಾದರು. ಈ ಬಗ್ಗೆ ಅನರ್ಹರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.