ADVERTISEMENT

ಬಿಎಸ್‌ವೈ ಇ.ಡಿ ಭಯದಲ್ಲಿದ್ದಾರೆ: ಎಂ. ಲಕ್ಷ್ಮಣ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 16:21 IST
Last Updated 14 ಡಿಸೆಂಬರ್ 2022, 16:21 IST
   

ಬೆಂಗಳೂರು: ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಜಾರಿ ನಿರ್ದೇಶನಾಲಯದ (ಇ.ಡಿ) ಭಯದಲ್ಲಿದ್ದಾರೆ. ಇ.ಡಿ ಆಣತಿಯಂತೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಕೆ‍ಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇ.ಡಿ ಅಧಿಕಾರಿಗಳೇ ಯಡಿಯೂರಪ್ಪ ಹಿಂದೆ ಅಂಗರಕ್ಷಕರ ವೇಷದಲ್ಲಿ ನಿಂತಿರುತ್ತಾರೆ. ಅವರ ಸೂಚನೆಯಂತೆ ಯಡಿಯೂರಪ್ಪ ಮಾತನಾಡುತ್ತಾರೆ’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬೃಹತ್‌ ‍ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿರುವ ಮಾಹಿತಿಗಳು ಲಭ್ಯವಾಗಿವೆ. ದಾಖಲೆ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ರವಿ ಅವರು ಬಾಮೈದ ಸುದರ್ಶನ್‌ ಹೆಸರಿನಲ್ಲಿ ಬೇನಾಮಿಯಾಗಿ ಸರ್ಕಾರದ ಕಾಮಗಾರಿಗಳ ಗುತ್ತಿಗೆಯನ್ನೂ ಪಡೆಯುತ್ತಿದ್ದಾರೆ. ಈ ಎಲ್ಲದರ ವಿರುದ್ಧ ಕಾಂಗ್ರೆಸ್‌ ಪಕ್ಷದ ಹೋರಾಟ ನಡೆಸಲಿದೆ ಎಂದು ಹೇಳಿದರು.

ADVERTISEMENT

‘ರವಿ ಅವರ ಪ್ರಭಾವದಿಂದ ಸುದರ್ಶನ್‌ ಅವರು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆಸಿಕೊಂಡು ಸಭೆ ನಡೆಸುತ್ತಿದ್ದಾರೆ. ಅವರ ಸೂಚನೆಯಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್‌ ಬಾಬು ಮಾತನಾಡಿ, ‘ರಾಜ್ಯ ವಿಧಾನಮಂಡಲದಲ್ಲಿ ಕಾಗದರಹಿತ ವ್ಯವಸ್ಥೆ ಜಾರಿಗೊಳಿಸುವ ಹೆಸರಿನಲ್ಲಿ ₹ 250 ಕೋಟಿ ಮೊತ್ತದ ಹಗರಣ ನಡೆಯುತ್ತಿದೆ. ಹಣ ಲೂಟಿ ಮಾಡುವುದಕ್ಕಾಗಿಯೇ ಕೇಂದ್ರ ಸರ್ಕಾರದ ಇ–ವಿಧಾನ್‌ ಯೋಜನೆಯನ್ನು ಬಿಟ್ಟು ನೇರವಾಗಿ ಡಿಜಿಟಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.