ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಈ ಮೊದಲು ನೀಡಿರುವ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.
‘ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ (ಧಾರವಾಡ) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬುಧವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಆದ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್, ಯಡಿಯೂರಪ್ಪ ಅವರು ಘಟನೆ ನಡೆದ ದಿನ ಬಾಲಕಿಯ ಜೊತೆ ಹೇಗೆ ಅನುಚಿತವಾಗಿ ನಡೆದುಕೊಂಡರು ಮತ್ತು ಈ ಕುರಿತಂತೆ ದೂರುದಾರರೂ ಆದ ಆಕೆಯ ತಾಯಿ (ಅವರು ಈಗ ಬದುಕಿಲ್ಲ) ತನಿಖಾಧಿಕಾರಿಗಳಿಗೆ ಒದಗಿಸಿರುವ ಸಾಕ್ಷ್ಯಾಧಾರ, ಬಾಲಕಿಯ ಸ್ವಇಚ್ಛಾ ಹೇಳಿಕೆಯೂ ಸೇರಿದಂತೆ ದೋಷಾರೋಪ ಪಟ್ಟಿಯಲ್ಲಿನ ಪ್ರಮುಖ ಅಂಶಗಳನ್ನು ಸವಿಸ್ತಾರವಾಗಿ ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಾಸಿಕ್ಯೂಷನ್‌ನ ಸುದೀರ್ಘ ವಾದ ಆಲಿಸಿದ ನ್ಯಾಯಮೂರ್ತಿಯವರು ಯಡಿಯೂರಪ್ಪ ಪರ ವಕೀಲರ ವಾದ ಮಂಡನೆಗೆ ಇದೇ 17ಕ್ಕೆ ದಿನಾಂಕ ನಿಗದಿಪಡಿಸಿ, ಅಲ್ಲಿಯವರೆಗೂ ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ವಿಸ್ತರಿಸಿ ವಿಚಾರಣೆ ಮುಂದೂಡಿದರು. ಮತ್ತೊಬ್ಬ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ಎನ್.ನಾಯಕ್ ಅವರೂ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.