ADVERTISEMENT

'ಒಬ್ರು ಇಬ್ರೂ ಇದ್ರೆ ಕುಟುಂಬ ರಾಜಕಾರಣ ಅಲ್ಲ, ಮೊಮ್ಮಕ್ಕಳು ಸೊಸೆ ಇರಬಾರದು'

ಸಂತೋಷ್ ಅವರ ಡಿಎನ್‌ಎ ಹೇಳಿಕೆ ಪ್ರಶ್ನೆ ಕೇಳಿದೊಡನೆ ಪತ್ರಿಕಾಗೋಷ್ಠಿ ಮುಗಿಸಿದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 9:26 IST
Last Updated 12 ಏಪ್ರಿಲ್ 2019, 9:26 IST
   

ಹುಬ್ಬಳ್ಳಿ: ‘ತಂದೆ ಮಗ ಕುಟುಂಬದ ಒಬ್ಬರು ಇಬ್ಬರು ರಾಜಕಾರಣದಲ್ಲಿ ಇರಬಹುದು, ಸೊಸೆ, ಮೊಮ್ಮಕ್ಕಳು ಇದ್ದರೆ ಮಾತ್ರ ಅದು ಕುಟುಂಬ ರಾಜಕಾರಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಪಾದಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಶಾಸಕ ನಿಮ್ಮ ಮಗ ಸಂಸದ ಇನ್ನೊಬ್ಬ ಮಗ ಸಹ ಪ‍ಕ್ಷದ ಹುದ್ದೆಯಲ್ಲಿದ್ದಾರೆ, ಜಗದೀಶ ಶೆಟ್ಟರ್ ಶಾಸಕ ಹಾಗೂ ಅವರ ಸಹೋದರ ಪ್ರದೀಪ ಶೆಟ್ಟರ್ ವಿಧಾನಪರಿಷತ್ ಸದಸ್ಯರು ಇದು ಕುಟುಂಬ ರಾಜಕಾರಣ ಅಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಯಾವ ರಾಜ್ಯದಲ್ಲಿ ಪಕ್ಷಕ್ಕೆ ಬಹುಮತ ಬರುತ್ತದೋ ಅಲ್ಲಿ ಸ್ವತಂತ್ರ ಸರ್ಕಾರ ಮಾಡುತ್ತೇವೆ. ಬರದಿದ್ದಾಗ ಉಳಿದ ಪಕ್ಷಗಳೊಂದಿಗೆ ಸೇರಿಸ ಸರ್ಕಾರ ರಚಿಸುತ್ತೇವೆ. ಕೇಂದ್ರದಲ್ಲಿ ನಮಗೆ ಬಹುಮತ ಬಂದಿದ್ದರೂ ಉಳಿದ ಪಕ್ಷಗಳನ್ನು ಭಾಗಿದಾರರನ್ನಾಗಿ ಮಾಡಿಕೊಳ್ಳಲಾಯಿತು’ ಎಂದು ಸಮ್ಮಿಶ್ರ ಸರ್ಕಾರಗಳು ದುರ್ಬಲ ಸರ್ಕಾರಗಳೇ? ಬಿಜೆಪಿಯೂ ಹಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಐಟಿ ದಾಳಿಯ ಬಗ್ಗೆ ಮೊದಲೇ ಮಾಹಿತಿ ಬಹಿರಂಗಪಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಗೋಪ್ಯತೆ ಉಲ್ಲಂಘಿಸಿದ್ದಾರೆ. ಮೊದಲೇ ಮಾಹಿತಿ ಸಿಕ್ಕ ಕಾರಣ ಸಾವಿರಾರು ಕೋಟಿ ರೂಪಾಯಿಯನ್ನು ಬೇರೆಡೆಗೆ ಸಾಗಿಸಲಾಯಿತು. ಪುಲ್ವಾಮ ದಾಳಿ ಮಾಹಿತಿ ಮೊದಲೇ ಇತ್ತು ಎಂಬ ಹೇಳಿಕೆ ಸಹ ಸಂವಿಧಾನ ವಿರೋಧಿ. ಮುಖ್ಯಮಂತ್ರಿಯಾದವರು ಎಚ್ಚರಿಕೆಯಿಂದ ಮಾತನಾಡಬೇಕು. ರಾಜ್ಯದಲ್ಲಿ 22 ಸೀಟು ಗೆಲ್ಲುತ್ತೇವೆ ಎಂಬ ರೇವಣ್ಣ ಅವರು ನಿಂಬೆ ಹಣ್ಣು ಹಿಡಿದು ಭವಿಷ್ಯ ಹೇಳಿದ್ರೆ ನಿಜವಾಗಲ್ಲ’ ಎಂದರು.

ಬಿಜೆಪಿ ಕಾಂಗ್ರೆಸ್ ನಾಯಕರ ಮನಸ್ತಾಪ ತೀವ್ರವಾಗುತ್ತಿದ್ದು, ಸರ್ಕಾರದ ಆಯಸ್ಸು ಮುಗಿಯುತ್ತಿದೆ. ಲೋಕಸಭಾ ಚುನಾವಣೆಯ ನಂತರ ಸರ್ಕಾರ ಇರುವುದಿಲ್ಲ. ಮಂಡ್ಯದಲ್ಲಿ ಸುಮಲತಾ ಅವರು ಗೆಲುವು ಖಚಿತವಾಗಿರುವುದರಿಂದ ಜೆಡಿಎಸ್‌ ಮುಖಂಡರು ಹತಾಶರಾಗಿ ಹಗರುವಾಗಿ ಮಾತನಾಡುತ್ತಿದ್ದರೆ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ವಿಚಾರ ಮುನ್ನೆಲೆಗೆ ಬಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತರೆಲ್ಲರೂ ಜೋಶಿ ಅವರ ಪರವಾಗಿಯೇ ಇದ್ದೇವೆಲ್ಲ ಎಂದು ಶೆಟ್ಟರ್, ಅರವಿಂದ ಬೆಲ್ಲದ ಅವರನ್ನು ತೋರಿಸಿದರು. ಕಳೆದ ಚುನಾವಣೆ ವೇಳೆ ವೀರಶೈವ ಲಿಂಗಾಯತ ವಿಷಯ ಪ್ರಸ್ತಾಪಿಸಿ ಅನಗತ್ಯ ಗೊಂದಲ ಮಾಡಿದರು ಎಂದರು.

ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಾಗ ಡಿಎನ್‌ಎ ನೋಡಲಾಗದು ಎಂಬ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಈಗಾಗಲೇ ಆ ಬಗ್ಗೆ ಹೇಳಿದ್ದೇನೆ ಎಂದು ಹೇಳಿ ಪತ್ರಿಕಾಗೋಷ್ಠಿ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.