ADVERTISEMENT

ಬಿಎಸ್‌ವೈ ಒತ್ತಡ: ರಾಜಕೀಯ ಕಾರ್ಯದರ್ಶಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 17:28 IST
Last Updated 30 ಸೆಪ್ಟೆಂಬರ್ 2021, 17:28 IST
   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿಗಳನ್ನಾಗಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಅವರನ್ನು ನೇಮಕ ಮಾಡಲಾಗಿದೆ.

ಶಾಸಕ ಬಿ.ಎಸ್‌.ಯಡಿಯೂರಪ್ಪ ಅವರ ಒತ್ತಡದ ಮೇರೆಗೆ ಈ ನೇಮಕಾತಿಗಳು ನಡೆದಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವಧಿಯಲ್ಲೂ ಇವರು ರಾಜಕೀಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಇವರ ಹುದ್ದೆಗಳೂ ರದ್ದಾಗಿದ್ದವು. ಇದೀಗ ಪುನಃ ಅವರನ್ನೇ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿರುವುದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

‘ರೇಣುಕಾಚಾರ್ಯ ಹಾಲಿ ಶಾಸಕರಾಗಿದ್ದು ಸಚಿವ ಸ್ಥಾನ ನೀಡಲಾಗದ ಕಾರಣ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದನ್ನು ಒಪ್ಪಬಹುದು. ಆದರೆ, ಮಾಜಿ ಶಾಸಕ ಜೀವರಾಜ್‌ಗೂ ಎರಡನೇ ಬಾರಿ ಅದೇ ಹುದ್ದೆ ನೀಡಿದ್ದು ಸರಿಯಲ್ಲ. ಇವೆರಡಕ್ಕೂ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅನಗತ್ಯ ಖರ್ಚಿಗೆ ದಾರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ’ ಎಂಬ ವ್ಯಾಖ್ಯಾನ ಬಿಜೆಪಿ ವಲಯದಲ್ಲಿ ವ್ಯಕ್ತವಾಗಿದೆ.

ಶೇ 20 ಕಡಿತ: ಯಡಿಯೂರಪ್ಪ ಅವಧಿಯಲ್ಲಿ ಮುಖ್ಯಮಂತ್ರಿ ಸಚಿವಾಲಯಕ್ಕೆ 300 ಮಂದಿ ಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಅದರಲ್ಲಿ ಶೇ 20 ರಷ್ಟು ಸಿಬ್ಬಂದಿಯನ್ನು ಮಾತ್ರ ಉಳಿಸಿಕೊಂಡಿದ್ದು, ಉಳಿದ ವರನ್ನು ಮನೆಗೆ ಕಳಿಸಲಾಗಿದೆ ಎಂದು ಸಚಿವಾಲಯ ಮೂಲಗಳು ಹೇಳಿವೆ.

ಅದೇ ಅವಧಿಯಲ್ಲಿ ಮುಖ್ಯಮಂತ್ರಿಯವರಿಗೆ ಸುಮಾರು 15 ಕ್ಕೂ ಹೆಚ್ಚು ಮಂದಿ ವಿಶೇಷ ಕರ್ತವ್ಯಾಧಿಕಾರಿಗಳು, ಸಲಹೆಗಾರರು, ಸಮನ್ವಯಾಧಿಕಾರಿಗಳೂ ಇದ್ದರು.

ಅಂದಿನ ಮುಖ್ಯಮಂತ್ರಿಯವರ ಕಾರ್ಯದರ್ಶಿಯಾಗಿದ್ದ ಪಿ.ರವಿಕುಮಾರ್‌ ಅವರು ಒಮ್ಮೆ ವಿಶೇಷ ಕರ್ತವ್ಯಾಧಿಕಾರಿಗಳ ಸಭೆ ಕರೆದು, ಪ್ರತಿಯೊಬ್ಬರು ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ಕೇಳಿದಾಗ ಬಹುತೇಕರಿಂದ ಯಾವುದೇ ಉತ್ತರ ಬಂದಿರಲಿಲ್ಲ.

ಅವರಲ್ಲಿ ಕೆಲವರು ಮತ್ತೆ ಅದೇ ಹುದ್ದೆಗಳಿಗೆ ಬರಲು ಯಡಿಯೂರಪ್ಪ ಅವರ ಮೂಲಕ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.