ADVERTISEMENT

ಕಟ್ಟಡ ನಕ್ಷೆ: ಶುಲ್ಕ ಇಳಿಕೆಗೆ ಪ್ರಸ್ತಾವ

ಕರಡು ನಿಯಮ ಪ್ರಕಟಿಸಿದ ನಗರಾಭಿವೃದ್ಧಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 20:30 IST
Last Updated 14 ಮಾರ್ಚ್ 2021, 20:30 IST
ನಿರ್ಮಾಣ ಹಂತದಲ್ಲಿರುವ ಕಟ್ಟಡ–ಸಾಂದರ್ಭಿಕ ಚಿತ್ರ
ನಿರ್ಮಾಣ ಹಂತದಲ್ಲಿರುವ ಕಟ್ಟಡ–ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕವನ್ನು ಇಳಿಕೆ ಮಾಡಲು ಮುಂದಾಗಿರುವ ನಗರಾಭಿವೃದ್ಧಿ ಇಲಾಖೆ, ಈ ಸಂಬಂಧ ಮಾರ್ಚ್‌ 10ರಂದು ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ದರ ನಿಗದಿಗೆ ಹಿಂದಿನ ಪದ್ಧತಿಯನ್ನು ಕೈಬಿಡಲು ನಿರ್ಧರಿಸಿರುವ ಇಲಾಖೆ, ಆಯಾ ಯೋಜನಾ ಪ್ರದೇಶಗಳಲ್ಲಿನ ಜನಸಂಖ್ಯೆಯ ಆಧಾರದಲ್ಲಿ ಪರಿಷ್ಕೃತ ದರ ನಿಗದಿ ಮಾಡಿದೆ. ಆಯಾ ಕಟ್ಟಡದ ಮಾರ್ಗಸೂಚಿ ದರದ ಒಟ್ಟು ಮೌಲ್ಯದ ಶೇಕಡ 0.1ರಿಂದ ಶೇ 0.5ರವರೆಗೆ ಶುಲ್ಕ ವಿಧಿಸುವ ಪ್ರಸ್ತಾವವನ್ನು ಈ ಅಧಿಸೂಚನೆಯಲ್ಲಿ ಪ್ರಕಟಿಸಿದೆ.

1993ರಿಂದಲೂ ಕಟ್ಟಡದ ಪ್ರತಿ ಚದರ ಅಡಿಗೆ ₹ 20 ರ ಕನಿಷ್ಠ ದರದ ಆಧಾರದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ವಿಧಿಸುವ ನಿಯಮ ಜಾರಿಯಲ್ಲಿತ್ತು. ಅದನ್ನು ಪರಿಷ್ಕರಿಸಿ 2020ರ ಫೆಬ್ರುವರಿ 25ರಿಂದ ಪೂರ್ವಾನ್ವಯವಾಗುವಂತೆ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿತ್ತು.

ADVERTISEMENT

ನಕ್ಷೆ ಮಂಜೂರಾತಿ ಶುಲ್ಕದ ಒಟ್ಟುಮೊತ್ತದ ಶೇ 8ರಷ್ಟು ಅಭಿವೃದ್ಧಿ ಶುಲ್ಕ ಪಾವತಿಯನ್ನೂ ಕಡ್ಡಾಯಗೊಳಿಸಲಾಗಿತ್ತು. ಕಟ್ಟಡದ ಮೊದಲ ಅಂತಸ್ತಿನ ನಕ್ಷೆ ಮಂಜೂರಾತಿಗೆ ವಸತಿ ಕಟ್ಟಡಗಳಿಗೆ ಸ್ಥಿರಾಸ್ತಿ ಮಾರ್ಗಸೂಚಿ ದರದ ಶೇ 0.5,ಕೈಗಾರಿಕಾ ಕಟ್ಟಡಗಳಿಗೆ ಶೇ 1, ವಾಣಿಜ್ಯ ಕಟ್ಟಡಗಳಿಗೆ ಶೇ 1.5 ಮತ್ತು ಇತರಸ್ವರೂಪದ ಕಟ್ಟಡಗಳಿಗೆ ಶೇ 0.5ರಷ್ಟುಶುಲ್ಕ ವಿಧಿಸಲು ಆದೇಶ ಹೊರಡಿಸಲಾಗಿತ್ತು.

ಬಹುಮಹಡಿ ಕಟ್ಟಡಗಳಿಗೆ ವಸತಿ ಉದ್ದೇಶಕ್ಕೆ ಪ್ರತಿ ಚದರ ಮೀಟರ್‌ಗೆ ₹ 20, ಕೈಗಾರಿಕಾ ಕಟ್ಟಡಗಳಿಗೆ ಚ.ಮೀ.ಗೆ ₹ 40, ವಾಣಿಜ್ಯ ಕಟ್ಟಡಗಳಿಗೆ ಚ.ಮೀ.ಗೆ ₹ 100 ಮತ್ತು ಇತರ ಕಟ್ಟಡಗಳಿಗೆ ಚ.ಮೀ.ಗೆ ₹ 20 ವಿಧಿಸಲಾಗಿತ್ತು.

ನಕ್ಷೆ ಮಂಜೂರಾತಿ ದರದಲ್ಲಿ ವಸತಿ ಕಟ್ಟಡಗಳಿಗೆ ಶೇ 25, ವಾಣಿಜ್ಯ ಕಟ್ಟಡಗಳಿಗೆ ಶೇ 37.5, ವಾಣಿಜ್ಯ ಕಟ್ಟಡಗಳಿಗೆ ಶೇ 62.5 ಮತ್ತು ಇತರ ಕಟ್ಟಡಗಳಿಗೆ ಶೇ 25ರಷ್ಟು ಹೆಚ್ಚಿಸಲಾಗಿತ್ತು. ದೊಡ್ಡ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿರುವುದಕ್ಕೆ ರಿಯಲ್‌ ಎಸ್ಟೇಟ್‌ ಉದ್ಯಮವೂ ಸೇರಿದಂತೆ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಮತ್ತೆ ದರ ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು.

‘ಕೋವಿಡ್‌ ನಂತರದಲ್ಲಿ ಎಲ್ಲ ಕ್ಷೇತ್ರಗಳೂ ಸಂಕಷ್ಟಕ್ಕೆ ಸಿಲುಕಿವೆ. ನಕ್ಷೆ ಮಂಜೂರಾತಿ ದರದಲ್ಲಿ ದೊಡ್ಡ ಪ್ರಮಾಣದ ಏರಿಕೆ ಮಾಡಿದರೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಅದನ್ನು ಗ್ರಾಹಕರ ಮೇಲೆ ವರ್ಗಾಯಿಸುತ್ತಾರೆ. ಅಂತಿಮವಾಗಿ ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ.

ಈ ಅಂಶವನ್ನು ಆಧರಿಸಿ ನಕ್ಷೆ ಮಂಜೂರಾತಿ ದರ ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.