ADVERTISEMENT

ಬಂದ್‌: ಪ್ರತಿಭಟನೆ ಜೋರು

ಹಳೆ ಮೈಸೂರು, ಮಧ್ಯ ಕರ್ನಾಟಕದಲ್ಲಿ ಬಂದ್‌: ಉತ್ತರ ಕರ್ನಾಟಕ–ಕರಾವಳಿಯಲ್ಲಿ ಸಪ್ಪೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 20:29 IST
Last Updated 28 ಸೆಪ್ಟೆಂಬರ್ 2020, 20:29 IST
ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತ ಪರ ಸಂಘಟನೆಗಳು ಕರ್ನಾಟಕ ಬಂದ್‌ ಅಂಗವಾಗಿ ಬೆಂಗಳೂರಿನ ಟೌನ್‌ಹಾಲ್‌ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಗಮನ ಸೆಳೆದ ಹಿರಿ ಜೀವ –ಪ್ರಜಾವಾಣಿ ಚಿತ್ರ
ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತ ಪರ ಸಂಘಟನೆಗಳು ಕರ್ನಾಟಕ ಬಂದ್‌ ಅಂಗವಾಗಿ ಬೆಂಗಳೂರಿನ ಟೌನ್‌ಹಾಲ್‌ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಗಮನ ಸೆಳೆದ ಹಿರಿ ಜೀವ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೃಷಿ ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ, ಕಾರ್ಮಿಕ, ದಲಿತ ಮತ್ತು ಕನ್ನಡ ಸಂಘಟನೆಗಳು ಕರೆ ನೀಡಿದ್ದ ಸೋಮವಾರದ ಕರ್ನಾಟಕ ಬಂದ್‌ಗೆ ರಾಜ್ಯದ ವಿವಿಧೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಪಿಎಂಸಿ, ಭೂಸುಧಾರಣೆ ಕಾಯ್ದೆ ಹಾಗೂ ಕಾರ್ಮಿಕ ವಿವಾದಗಳ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ಸುಗ್ರೀವಾಜ್ಞೆ, ಮಸೂದೆ ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಎಲ್ಲ ಕಡೆ ಬಂದ್‌ ನಡೆದಿಲ್ಲ. ಆದರೆ, ಬಹುತೇಕ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್‌ ಪ್ರಮಾಣದ ಪ್ರತಿಭಟನೆಗಳು ನಡೆದವು. ಭಾರಿ ಸಂಖ್ಯೆಯಲ್ಲಿ ಜನರು ಹೋರಾಟದಲ್ಲಿ ಭಾಗಿಯಾಗಿದ್ದರು.

ರೈತರೊಂದಿಗೆ ಕಾರ್ಮಿಕರು, ದಲಿತ ಮತ್ತು ಕನ್ನಡ ಸಂಘಟನೆಗಳ ಸದಸ್ಯರು, ಕಾಂಗ್ರೆಸ್‌, ಜೆಡಿಎಸ್‌, ಎಡ ಪಕ್ಷಗಳು ಸೇರಿದಂತೆ ಹಲವಾರು ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಿದ್ದವು. ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಎಪಿಎಂಸಿ ಮಾರುಕಟ್ಟೆಗಳು, ಮಾರುಕಟ್ಟೆಗಳು ಬಂದ್‌ ಆಗಿದ್ದವು.

ADVERTISEMENT

ರಾಜಧಾನಿ ಸುತ್ತ ವ್ಯಾಪಕ ಬೆಂಬಲ: ಬೆಂಗಳೂರು ನಗರದಲ್ಲಿ ಬೆಳಗ್ಗಿನ ಕೆಲ ಗಂಟೆಗಳ ಕಾಲ ವಾಹನ ಸಂಚಾರ ವಿರಳವಾಗಿತ್ತು. ಪುರಭವನದ ಎದುರು ಸಾವಿರಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸುವ ಮೂಲಕ ಕಾಯ್ದೆಗಳ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.

ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಂದ್‌ ಬಹುತೇಕ ಯಶಸ್ವಿಯಾಗಿದೆ. ರಾಮನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದ್ದು, ಬೆಂಗಳೂರು– ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ತುಮಕೂರು ಜಿಲ್ಲೆಯ ವಿವಿಧೆಡೆ ರೈತರು ಬೃಹತ್‌ ಪ್ರತಿಭಟನಾ ಜಾಥಾಗಳನ್ನು ನಡೆಸಿದರು.

ಬಸ್‌ ಸಂಚಾರಕ್ಕೆ ತಡೆ: ಕಲ್ಯಾಣ ಕರ್ನಾಟಕದ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳದಲ್ಲಿ ಬಂದ್‌ ಕರೆಗೆ ಉತ್ತಮ ಸ್ಪಂದನೆ ದೊರೆಯಿತು. ಕಲಬುರ್ಗಿಯಲ್ಲಿ ಪ್ರತಿಭಟನಾಕಾರರು, ಬಸ್‌ ಸಂಚಾರಕ್ಕೆ ತಡೆ ಒಡ್ಡಿದರು.

ಕೊಪ್ಪಳ ಜಿಲ್ಲೆಯ ಇರಕಲ್ಲಗಡ ಗ್ರಾಮದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಕುಷ್ಟಗಿ, ಇಳಕಲ್‌, ಬಾಗಲಕೋಟೆಗೆ ಹೋಗುತ್ತಿದ್ದ ಪ್ರಯಾಣಿಕರು ನಾಲ್ಕು ಗಂಟೆ ಪರದಾಡಿದರು. ಬೀದರ್ ಜಿಲ್ಲೆಯಲ್ಲಿ ಜನಜೀವನ ಎಂದಿನಂತೆ ಇತ್ತು. ಯಾದಗಿರಿ ಮತ್ತು ಸುರಪುರ ನಗರದಲ್ಲಿ ಮಾತ್ರ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಬೆಳಿಗ್ಗೆ ಬಂದ್‌ ಕಾವು ಜೋರಾಗಿತ್ತು. ಮಂಡ್ಯ ಜಿಲ್ಲೆಯ ಮೂರು ಕಡೆ ರೈತ ಮುಖಂಡರು ಎತ್ತಿನ ಗಾಡಿ, ಕಬ್ಬು ತುಂಬಿದ ಲಾರಿಗಳನ್ನು ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಣ ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ತಾಲ್ಲೂಕು ಕಚೇರಿ ಎದುರು ಏಕಾಂಗಿಯಾಗಿ ಧರಣಿ ನಡೆಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲೂ ಬೃಹತ್‌ ಪ್ರತಿಭಟನೆಗಳು ನಡೆದವು.ವಾಹನ ಮತ್ತು ಜನ ಸಂಚಾರ ಎಂದಿಗಿಂತ ಕಡಿಮೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.