ADVERTISEMENT

ಬರ್ನಾಬಿಯಲ್ಲಿ ಸೆ. 5ಕ್ಕೆ ಗೌರಿ ಲಂಕೇಶ್ ದಿನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 16:22 IST
Last Updated 1 ಸೆಪ್ಟೆಂಬರ್ 2021, 16:22 IST
ಗೌರಿ ಲಂಕೇಶ್
ಗೌರಿ ಲಂಕೇಶ್   

ಬೆಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಗೌರವಾರ್ಥ ಇದೇ 5ರಂದು ಕೆನಡಾದ ಬರ್ನಾಬಿ ನಗರದಲ್ಲಿ ‘ಗೌರಿ ಲಂಕೇಶ್‌ ದಿನ’ ಆಚರಿಸಲಾಗುತ್ತಿದೆ.

ಬರ್ನಾಬಿ ಮಹಾನಗರ ಪಾಲಿಕೆಯ ಮೇಯರ್‌ ಮೈಕ್‌ ಹರ್ಲೆ ಅವರು ಈ ಕುರಿತು ಆಗಸ್ಟ್ 31ರಂದು ಘೋಷಣೆ ಹೊರಡಿಸಿದ್ದಾರೆ. ‘ಗೌರಿ ಲಂಕೇಶ್‌ ಸತ್ಯ ಮತ್ತು ನ್ಯಾಯದ ಪರ ನಿಂತ ಧೈರ್ಯಶಾಲಿ ಪತ್ರಕರ್ತೆ. ದಮನಕಾರಿ ನೀತಿ ವಿರುದ್ಧ ಮತ್ತು ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸಿದ್ದರು. ಬಲಪಂಥೀಯ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅವರ ಸ್ಮರಣಾರ್ಥ ಭಾನುವಾರ (ಸೆ.5) ಬರ್ನಾಬಿ ನಗರದಲ್ಲಿ ಗೌರಿ ಲಂಕೇಶ್‌ ದಿನ ಆಚರಿಸಲಾಗುತ್ತಿದೆ’ ಎಂದು ಘೋಷಣೆಯಲ್ಲಿ ಉಲ್ಲೇಖಿಸಿದ್ದಾರೆ.

ಪಂಜಾಬ್‌ನಲ್ಲಿ ಪೊಲೀಸರ ದೌರ್ಜನ್ಯದಿಂದ ಪ್ರಾಣ ಕಳೆದುಕೊಂಡಿದ್ದ ಪತ್ರಕರ್ತ ಜಸ್ವಂತ್‌ ಸಿಂಗ್‌ ಕಾಲ್ರಾ ಸ್ಮರಣಾರ್ಥ ಬರ್ನಾಬಿಯಲ್ಲಿ 2020ರಲ್ಲಿ ‘ಜಸ್ವಂತ್‌ ಸಿಂಗ್‌ ಕಾಲ್ರಾ’ ಸ್ಮರಣೆಯ ದಿನ ಆಚರಿಸಲಾಗಿತ್ತು. ಅದೇ ಮಾದರಿಯಲ್ಲಿ ಈ ಬಾರಿ ಗೌರಿ ಲಂಕೇಶ್‌ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಬರ್ನಾಬಿ ಮಹಾನಗರ ಪಾಲಿಕೆ ವೆಬ್‌ಸೈಟ್‌ನಲ್ಲಿ ಘೋಷಣೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ADVERTISEMENT

‘ಬರ್ನಾಬಿಯ ಪಾಲಿಕೆ ಸದಸ್ಯ ಸಾವ್‌ ಧಾಲಿವಾಲ್‌, ಬರ್ನಾಬಿ ಸ್ಕೂಲ್‌ ಟ್ರಸ್ಟಿ ಬಲ್ಜಿಂದರ್‌ ಕುಮಾರ್‌ ನಾರಂಗ್‌ ಪ್ರಯತ್ನದಿಂದ ಈ ಘೋಷಣೆಗಳು ಹೊರಬಿದ್ದಿವೆ. ದಕ್ಷಿಣ ಏಷ್ಯಾ ಸಮುದಾಯವನ್ನು ಪ್ರತಿನಿಧಿಸುವ ರ್‍ಯಾಡಿಕಲ್‌ ದೇಸಿ ಮತ್ತು ಇತರ ಸದಸ್ಯರ ಮನವಿಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಾನವ ಹಕ್ಕುಗಳ ಪರ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.